ಬೆಂಗಳೂರು, ಜೂ 7,ಅನ್ ಲಾಕ್ 1.0 ಹಿನ್ನೆಲೆಯಲ್ಲಿ ಸೋಮವಾರದಿಂದ ರಾಜ್ಯದಲ್ಲಿ ದೇಗುಲಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ದೇಗುಲದ ಆಡಳಿತ ಮಂಡಳಿ ಭಕ್ತರು ಪಾಲಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ದೇವರ ದರ್ಶನದ ಸಮಯವನ್ನು ಬೆಳಗ್ಗೆ 8.30ರಿಂದ ಸಂಜೆಯವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಜೊತೆಗೆ, ದೇಗುಲದ ವಸತಿಗೃಹಗಳಲ್ಲಿ ಭಕ್ತರಿಗೆ ತಂಗಲು ಅವಕಾಶ ಕಲ್ಪಿಸಲಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಜೊತೆಗೆ, ದೇಗುಲದ ಪ್ರವೇಶ ದ್ವಾರದ ಬಳಿ ಕಡ್ಡಾಯವಾಗಿ ಭಕ್ತರ ತಪಾಸಣೆ ನಡೆಸಲಾಗುವುದು, ಕೈಗೊಳಿಗೆ ಸ್ಯಾನಿಟೈಸರ್ ನೀಡಲಾಗುವುದು.
ಜ್ವರ, ಕೆಮ್ಮು, ಶೀತವಿರುವ ಭಕ್ತರಿಗೆ ಕಡ್ಡಾಯವಾಗಿ ಪ್ರವೇಶ ಕಲ್ಪಿಸಲಾಗುವುದಿಲ್ಲ ಎಂದಿದೆ. ಮಾಸ್ಕ್ ಧರಿಸದ ಭಕ್ತರಿಗೆ ಪ್ರವೇಶ ನೀಡಲಾಗದು. ಅಲ್ಲದೆ, ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಗಂಧ, ತೀರ್ಥ, ಮಂಗಳಾರತಿ, ಪ್ರಸಾದ ಮತ್ತು ಅನ್ನ ಪ್ರಸಾದದ ವಿನಿಯೋಗವಿಲ್ಲ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಂಬ, ಗೋಡೆಗಳನ್ನು ಮುಟ್ಟುವಂತಿಲ್ಲ. ಅಡ್ಡ ಬಿದ್ದು ನಮಸ್ಕಾರ ಮಾಡುವುದು ಅಥವಾ ಕೂರಲು ಅವಕಾಶವಿಲ್ಲ ಎಂದು ಪ್ರಕಟಣೆ ತಿಳಿಸಿದೆ.ದೇಗುಲದ ಕಲ್ಯಾಣಿಯಲ್ಲಿ ಸ್ನಾನ ಮಾಡಲು ಭಕ್ತರಿಗೆ ಅವಕಾಶ ನೀಡಿಲ್ಲ. ಜೊತೆಗೆ 10 ವರ್ಷ ಕೆಳಗಿನ ಹಾಗೂ 65 ವರ್ಷ ಮೇಲ್ಪಟ್ಟವರು ಮತ್ತು ಗರ್ಭಿಣಿಯರಿಗೆ ಕೂಡ ಪ್ರವೇಶ ನಿಷೇಧಿಸಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.