ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟ ಪ್ರಕರಣ: ಪೊಲೀಸರಿಗೆ ಶರಣಾದ ಆದಿತ್ಯ ರಾವ್

ಬೆಂಗಳೂರು,  ಜ. 22:    ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣದ ಶಂಕಿತ  ಆರೋಪಿ ಆದಿತ್ಯ ರಾವ್ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. 

ಉಡುಪಿ ಮೂಲದ ಆದಿತ್ಯ ರಾವ್, ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರ ಎದುರಿಗೆ ಬುಧವಾರ ಬೆಳಗ್ಗೆ ಶರಣಾಗಿದ್ದಾನೆ. 

ಆರೋಪಿ ನೀಲಮಣಿ ರಾಜು ಅವರ ಎದುರಿಗೆ ವಿಮಾನ ನಿಲ್ದಾಣದಲ್ಲಿ ತಾನೇ ಸಜೀವ ಬಾಂಬ್ ಇಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

ನಂತರ  ಪೊಲೀಸರು ಆರೋಪಿಯನ್ನು ಹಲಸೂರು ಗೇಟ್ ಠಾಣೆಗೆ ಕರೆತಂದು, ವೈದ್ಯಕೀಯ ಪರೀಕ್ಷೆಗಾಗಿ  ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಆರೋಪಿಯನ್ನು ಪೊಲೀಸರು ಅಜ್ಞಾತ  ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ. ಈಗ ಮಂಗಳೂರು ಪೊಲೀಸರು ಬೆಂಗಳೂರಿಗೆ ಪ್ರಯಾಣ  ಬೆಳೆಸಿದ್ದು, ನಂತರ ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಒಪ್ಪಿಸಲಿದ್ದಾರೆ

ಈ  ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ‌ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರು  ಏರಪೋರ್ಟ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ಸಂಘಟನೆ, ಸಮುದಾಯದ ಬಗ್ಗೆ  ಮಾತನಾಡಲಿಲ್ಲ. ಯಾರೇ ತಪ್ಪಿತಸ್ಥರಿದ್ದರು ಬಂಧಿಸುವುದ್ದಾಗಿ ತಿಳಿಸಿದ್ದೆವು ಎಂದರು. 

ಪೊಲೀಸರು  ಪ್ರಾಮಾಣಿಕ, ನಿಷ್ಪಕ್ಷಪಾತವಾಗಿ ತನಿಖೆ ಮಾಡಿದ್ದಾರೆ. ತಮ್ಮ ರಾಜಕೀಯ ಬೆಳೆ  ಬೇಯಿಸಿಕೊಳ್ಳಲು ಪೊಲೀಸರ ನಿಯತ್ತಿನ ಬಗ್ಗೆ ಹಗುರವಾಗಿ ಮಾತನಾಡಬಾರದು. ಅಲ್ಲದೇ, ಮಾಜಿ  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದುಷ್ಕ್ರತ್ಯ ಮಾಡುವವರ ಜನರನ್ನು  ಪ್ರಚೋದಿಸುವುದು ಕೆಲಸ ಮಾಡದಿರಲಿ. ಇಂತಹ ವಿಷಯದಲ್ಲಿ ಅವರು ಎಚ್ಚರ ವಹಿಸಲಿ ಎಂದರು. 

ಇತ್ತೀಚೆಗೆ  ಮಂಗಳೂರು ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನಾಮಧೇಯ ವ್ಯಕ್ಯಿಯೊಬ್ಬ ಸಜೀವ  ಬಾಂಬ್ ಇಟ್ಟು ಪರಾರಿಯಾಗಿದ್ದನು. ಘಟನೆಯ ಕುರಿತು ಪೊಲೀಸರು ಸಿಸಿಟಿವಿ ಆಧರಿಸಿ,  ಶಂಕಿತನ ಭಾವ ಚಿತ್ರ ಬಿಡುಗಡೆಗೊಳಿಸಿದ್ದರು. 

ಈಗ ಆದಿತ್ಯ ರಾವ್ ತಾನೇ ಬಾಂಬ್ ಇಟ್ಟಿರುವುದಾಗಿ ಶರಣಾಗಿದ್ದಾನೆ.