ಜಮಖಂಡಿ 17: ವಾಹನ ಚಾಲನಾ ಪರವಾಣಿಗೆ ಪಡೆದರೂ ಸಾಲದು ಕಡ್ಡಾಯವಾಗಿ ಅದರ ನಿಯಮ ಪಾಲನೆ ಮಾಡುವದು ಅವಶ್ಯವಾಗಿದೆ. ಇದರಿಂದ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗುವದು ಎಂದು ಡಿವಾಯ್‌ಎಸ್‌ಪಿ ಶಾಂತವೀರ ಈ ಹೇಳಿದರು.
ನಗರದ ಹೊರವಲಯದ ಮುಧೋಳ ರಸ್ತೆಯ ಸಹಾಯ ಪ್ರಾದೇಶಿಕ ಸಾರಿಗೆ ಕಛೇರಿ ಆವರಣದಲ್ಲಿ ಸಾರಿಗೆ ಇಲಾಖೆ ಜಿಲ್ಲಾ ಆಡಳಿತ ಹಾಗೂ ಪೋಲಿಸ್ ಇಲಾಖೆ ಇವರ ಸಹಯೋಗದಲ್ಲಿ 2024 ಹಿ 25 ನೇ ಸಾಲಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಹೆಲ್ಮೆಟ್ ಇಲ್ಲದೆ, ಸರಾಯಿ ಕುಡಿದು, ಅತೀ ವೇಗದಿಂದ ವಾಹನ ಚಾಲನೆ ಮಾಡುವದರಿಂದ ಹೆಚ್ಚು ಅಪಘಾತಗಳು ಸಂಬವಿಸುತ್ತಿವೆ. ಪ್ರತಿ ವರ್ಷ ದೇಶದಲ್ಲಿ 1,80 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತಿದ್ದಾರೆ. 40 ರಿಂದ 50 ಸಾವಿರ ಬೈಕ್ ಸವಾರರು ರಸ್ತೆ ಅಪಘಾತದಲ್ಲಿ, ಅದರಲ್ಲೂ ಶೇ 60 ರಷ್ಟು ಯುವಕರು ಸಾವನ್ನಪ್ಪುತ್ತಿರುವದು ಕಳವಳ ಸಂಗತಿ ಎಂದರು.
ಹುನ್ನೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ. ಎನ್.ವಿ ಅಸ್ಕಿ ಮಾತನಾಡಿ. ಸುರಕ್ಷತೆ ನಿಯಮ ಅವಶ್ಯವಾಗಿವೆ. ನಿಯಮಗಳೆ ನಮ್ಮ ಸಂವಿಧಾನ ನಿಯಮವಿಲ್ಲದೆ ಬದಕು ನಡೆಯುವುದಿಲ್ಲ ನಿಯಮಗಳು ನಮ್ಮನ್ನು ಏಚ್ಚರಿಕೆ ಮಾಡುತ್ತವೆ. ಜೀವನ ಸರಿಯಾಗಿದ್ದರೆ ಮಾತ್ರ ಇಡೀ ಕುಟುಂಬದ ವ್ಯವಸ್ಥೆ ಸರಿಯಾಗಿರುತ್ತದೆ ಎಂದರು.
ವಾಹನ ಹಿರಿಯ ತನಿಖಾಧಿಕಾರಿ ಸದಾಶಿವ ಮರಿಲಿಂಗನ್ನವರ ಮಾತನಾಡಿ. ವಾಹನ ನಿಮ್ಮದಾದರೆ ರಸ್ತೆ ನಿಮ್ಮದಲ್ಲ. ನಿಧಾನವೇ ಪ್ರಧಾನವೆಂಬುವುದನ್ನು ಸ್ಮರಿಸಿಕೊಂಡು ವಾಹನ ಚಾಲನೆ ಮಾಡಿದರೆ ತಮಗೂ ಸುರಕ್ಷತೆ ಮತ್ತು ಕುಟುಂಬಕ್ಕೆ ಆಸರೆಯಾಗಿ ಬದಕು ಸಾಗಿಸಬಹುದು ರಸ್ತೆಯ ನಿಯಮ ಮತ್ತು ಚಿಹ್ನೆಗಳನ್ನು ಸರಿಯಾಗಿ ಗಮನದಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡಬೇಕು. ವಾಹನ ಚಲಿಸುವಾಗ ಮೊಬೈಲ್ ಬಳಕೆ, ಮದ್ಯಪಾನ ಮಾಡಬಾರದು ಇದರಿಂದ ಅಪಘಾತಗಳನ್ನು ತಡೆಯಲು ಸಾಧ್ಯವಾಗುವದು ಎಂದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯರಾಂ ನಾಯಕ ಮಾತನಾಡಿ. ಶರೀರ ದೇವರು ಕೊಟ್ಟ ಕೊಡುಗೆ ಇದನ್ನು ಸರಿಯಾಗಿ ಉಳಿಸಿಕೊಳ್ಳಬೇಕು. ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡಿದರೆ ಜೀವಕ್ಕೆ ಮತ್ತು ಕುಟುಂಬಕ್ಕೆ ಹಾನಿ ಉಂಟಾಗುವದು ಎಂದರು. 18 ವರ್ಷದೊಳಗಿನ ಯುವಕ ಯುವತಿಯರ ಕೈಯಲ್ಲಿ ವಾಹನವನ್ನು ನೀಡಬಾರದು. 18 ವರ್ಷ ಪೂರ್ಣಗೊಂಡ ನಂತರ ವಾಹನ ಚಾಲನಾ ಪರವಾಣಿಗೆ ಪಡೆದು ಮತ್ತು ನಿಯಮಗಳನ್ನು ಪರಿಪಾಲನೆ ಮಾಡುವದು ಕಡ್ಡಾಯವಾಗಿದೆ. ಅದನ್ನು ಪಾಲಕರು ಮನೆಯಲ್ಲಿ ತಿಳಿಹೇಳಬೇಕು ಮತ್ತು ಕೆಲ ಸಂಸ್ಕಾರಗಳನ್ನು ನೀಡುವುದು ಇಂದು ಅವಶ್ಯವಾಗಿದೆ ಎಂದರು.
ವೇದಿಕೆಯಲ್ಲಿ ವಾಹನ ತನಿಖಾಧಿಕಾರಿ ಭಾಗ್ಯಶ್ರೀ ಕಟ್ಟಿಮನಿ ಇದ್ದರು. ಸುದರ್ಶನ ಚಲವಾದಿ ಸ್ವಾಗತಿಸಿ ನಿರೂಪಿಸಿದರು. ಡಿ.ಬಿ ಚನ್ನಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಭದ್ರೆ ವಂದಿಸಿದರು.