ನೀರಿನಲ್ಲಿ ಕೊಚ್ಚಿ ಹೋದ ಯುವಕ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಗೆಣ್ಣೂರ ಭೇಟಿ

ನೀರಿನಲ್ಲಿ ಕೊಚ್ಚಿ ಹೋದ ಯುವಕ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಗೆಣ್ಣೂರ ಭೇಟಿ  Additional District Magistrate Gennur visits the site of a youth who was swept away in the water

 ತಾಳಿಕೋಟಿ 28: ಹತ್ತಿರ ಡೋಣಿ ನದಿಯಲ್ಲಿ ಸೆಪ್ಟೆಂಬರ್ 24ರಂದು ಬೈಕ್ ಸಮೇತ ಕೊಚ್ಚಿ ಹೋದ ಸೇತುವೆ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಶನಿವಾರ ಭೇಟಿ ನೀಡಿದರು. ತಾಳಿಕೋಟಿಗೆ ಬಂದಿದ್ದ ವಡವಡಗಿ ಗ್ರಾಮದ ಯುವಕರಿಬ್ಬರು ಮರಳಿ ಹೋಗುವಾಗ ಡೋಣಿ ಸೇತುವೆ ಮೇಲಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು ಅದರಲ್ಲಿ ಮಹಾಂತೇಶ ಹೊಸಗೌಡರ ಎಂಬಾತನನ್ನು ರಕ್ಷಿಸಲಾಗಿದ್ದು, ಸಂತೋಷ್ ಹಡಪದ ಎನ್ನುವ ಇನ್ನೊಬ್ಬನು ಇಲ್ಲಿಯವರೆಗೆ ಪತ್ತೆಯಾಗಿಲ್ಲ ಶೋಧ ಕಾರ್ಯ ಮುಂದುವರೆದಿದೆ.  

 ಈ ಘಟನೆ ಕುರಿತು ಅಪರ ಜಿಲ್ಲಾಧಿಕಾರಿ ಗೆಣ್ಣೂರ ಅವರು ಸ್ಥಳದಲ್ಲಿದ್ದ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು. ತಹಸಿಲ್ದಾರ್ ಹೂಗಾರ ಅವರು ಕಳೆದ ಮೂರು ದಿನಗಳಿಂದ ನಿರಂತರ ಮಳೆ ಬರುತ್ತಿರುವುದರಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಇದರಿಂದ ಶೋಧ ಕಾರ್ಯದಲ್ಲಿ ತೊಂದರೆಯಾಗುತ್ತಿದೆ ಎಂದು ತಿಳಿಸಿದಾಗ ಗೆಣ್ಣೂರ ಅವರು ನೀರಿನ ರಭಸ ತಗ್ಗಿದ ನಂತರ ಶೀಘ್ರ ಶೋಧ ಕಾರ್ಯ ಮುಂದುವರಿಸಿ ಎಂದು ಸೂಚನೆ ನೀಡಿದರು. 

 ಬೆಳೆ ಹಾನಿ ವೀಕ್ಷಣೆ: ಇದೇ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದ ರೈತರ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಮಿಣಜಗಿ ಭಾಗದ ಸುಮಾರು 5 ಸರ್ವೇ ನಂಬರ್ ಗಳಲ್ಲಿ ಬರುವ ಜಮೀನುಗಳ ಹಾಗೂ ಡೋಣಿ ನದಿ ತಟದ ಕೆಲವು ಜಮೀನುಗಳ ಬೆಳೆ ವೀಕ್ಷಣೆ ನಡೆಸಿದರು.  

ನಂತರ ಅವರು ಆದ ಹಾನಿಯ ಸಮೀಕ್ಷೆಯನ್ನು ಸಮರ​‍್ಕವಾಗಿ ನಡೆಸಿ ಯಾವುದೇ ಅರ್ಹ ರೈತರ ಜಮೀನು ಕೈ ಬಿಟ್ಟು ಹೋಗದಂತೆ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಹಸಿಲ್ದಾರ್ ಡಾ.ವಿನಯಾ ಹೂಗಾರ, ಕೃಷಿ ಸಹಾಯಕ ನಿರ್ದೇಶಕ ಸುರೇಶ ಬಾವಿಕಟ್ಟಿ, ಕೃಷಿ ಅಧಿಕಾರಿ ಮಹೇಶ ಜೋಶಿ, ತೋಟಗಾರಿಕೆ ಇಲಾಖೆಯ ಶಫೀಕ ಬಾವೂರ,ಕಂದಾಯ ನೀರೀಕ್ಷಕ ವಿನೋದ ಕುಮಾರ ಸಿಂದಗಿ, ಗ್ರಾಮ ಲೆಕ್ಕಿಗ ಜಯರಾಮ ಚೌಹಾಣ್, ಗ್ರಾಮ ಸಹಾಯಕ ಗೀರೀಶ ತಳವಾರ ಹಾಗೂ ರಕ್ಷಣಾ ತಂಡದವರು ಮತ್ತಿತರರು ಇದ್ದರು