ಜೈಲಿನಿಂದ ಬಿಡುಗಡೆಗೊಂಡ ನಟ ಅಲ್ಲು ಅರ್ಜುನ್‌

Actor Allu Arjun released from jail

ಹೈದರಾಬಾದ್‌ 14: ತೆಲುಗು ನಟ, ‘ಪುಷ್ಪ’ ಖ್ಯಾತಿಯ ಅಲ್ಲು ಅರ್ಜುನ್‌ ಶನಿವಾರ ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2: ದಿ ರೂಲ್‌’ ಸಿನಿಮಾದ ಪ್ರೀಮಿಯರ್‌ ಪ್ರದರ್ಶನ ನಡೆಯುತ್ತಿದ್ದಾಗ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ 35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟರೆ ಅವರ ಮಗ 9 ವರ್ಷದ ಶ್ರೀತೇಜ್‌ ಗಾಯಗೊಂಡಿದ್ದಾನೆ.  ಇದೆ ಪ್ರಕರಣದಲ್ಲಿ ಅಲ್ಲು ಅರ್ಜುನ್​ ರನ್ನು ಬಂಧಿಸಲಾಗಿತ್ತು. ಅಲ್ಲು ಅರ್ಜುನ್‌ ಅವರು ಆ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೂಡಿ ಸಿನಿಮಾ ವೀಕ್ಷಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಜನರು  ನುಗ್ಗಿ ಬಂದ ಕಾರಣ ಕಾಲ್ತುಳಿತ ಉಂಟಾಗಿತ್ತು. 

ಶುಕ್ರವಾರ ಮಧ್ಯರಾತ್ರಿಯವರೆಗೂ ಅಲ್ಲು ಅರ್ಜುನ್​ ಬಿಡುಗಡೆಯ ಪ್ರಕ್ರಿಯೆ ಮುಂದುವರೆದಿತ್ತು. ನಂತರ ಪ್ರಕ್ರಿಯೆಗಳು ಮುಗಿದ ಬಳಿಕ ಅವರು ಇಂದು ಶನಿವಾರ ಬೆಳಗ್ಗೆ ಜೈಲಿನಿಂದ ಹೊರ ಬಂದಿದ್ದಾರೆ.

ಅಲ್ಲು ಅರ್ಜುನ್ ಅವರನ್ನು​ ಹೈದರಾಬಾದ್‌ ಪೊಲೀಸರು ಶುಕ್ರವಾರ ಬಂಧಿಸಿದರು. ಇಡೀ ದಿನ ಹಲವು ನಾಟಕೀಯ ಘಟನೆಗಳು ನಡೆಯಿತು. ಅಲ್ಲು ಅರ್ಜುನ್‌ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಚಿಕ್ಕಡಪಲ್ಲಿ ಠಾಣೆಯ ಪೊಲೀಸರು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನಂತರ ಅವರನ್ನು ಚಂಚಲಗುಡ ಜೈಲಿಗೆ ಕರೆತರಲಾಗಿತ್ತು.

ಬಳಿಕ, ತೆಲಂಗಾಣ ಹೈಕೋರ್ಟ್ ಸಂಜೆಯ ಹೊತ್ತಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತು.