ಕೇಂದ್ರ ಸಚಿವ ಸುರೇಶ ಅಂಗಡಿ ಭರವಸೆ | ತಾಯಿಯ ಮಡಿಲು, ತೊಟ್ಟಿಲು ಕಾರ್ಯಕ್ರಮ ಮಕ್ಕಳಲ್ಲಿ ಅನಾಥ ಪ್ರಜ್ಞೆ ಹೋಗಲಾಡಿಸಲು ಕ್ರಮ

ಲೋಕದರ್ಶನ ವರದಿ

ಬೆಳಗಾವಿ: ಹೆಣ್ಣು ಮಕ್ಕಳು ರಾಣಿ ಚನ್ನಮ್ಮಳ, ಗಂಡು ಮಕ್ಕಳು ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನ ದಮನ ಮಾಡಲು ಹೊರಟಿರುವ ದುಷ್ಠಶಕ್ತಿಗಳ ವಿರುದ್ಧ ಹೊರಾಡಬೇಕಿದೆ ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು. 

     ಬುಧವಾರ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನಿದಿಂದ ರೈಲ್ವೆ ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ್ದ ತಾಯಿಯ ಮಡಿಲು, ತೊಟ್ಟಿಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 

   ಹಿರಿಯರು ಅನಾಥ ಮಕ್ಕಳಿಗೆ ದಾರಿದೀಪ ವಾಗಿರುವುದು ಸಂತಸದ ವಿಷಯ. ರಾಜ್ಯದ ಎಲ್ಲ ರೈಲ್ವೆ ನಿಲ್ದಾಣದಲ್ಲಿ ತಾಯಿಯ ಮಡಿಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಅನಾಥ ಪ್ರಜ್ಞೆ ಮೂಡದಂತೆ ನೋಡಿಕೊಳ್ಳುವುದೇ ಕೇಂದ್ರ ಸರಕಾರದ ಗುರಿಯಾಗಿದೆ ಎಂದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ವಿಶೇಷವಾದ ಗೌರವವಿದೆ. ಆದರೆ ಇಂದಿನ ಆಧುನಿಕ ದಿನದಲ್ಲಿ ತಾಯಿಯ ಬಗ್ಗೆ ಗೌರವ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳನ್ನು ಬೀದಿಗೆ ಎಸೆಯಲಾಗುತ್ತಿದೆ. ಇದರಿಂದಲೇ ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಹೋಗಲಾಡಿಸಲು ಸ್ವಾಮಿ ವಿವೇಕಾನಂದ ಪ್ರತಿಷ್ಠಾನದವರು ಮಕ್ಕಳಿಗೆ ಜೀವ ತುಂಬುತ್ತಿದ್ದು, ಪ್ರತಿಷ್ಠಾನಕ್ಕೆ ಸರಕಾರದಿಂದ ಸಾಕಷ್ಟು ಸಹಕಾರ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಸೇರಿದಂತೆ ಇನ್ನಿತರ ಸಂಸ್ಥೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. 

ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕ ಅನಿಲ್ ಬೆನಕೆ, ಬಸವರಾಜ ನವರಟ್ಟಿ ರೈಲ್ವೆ ಇಲಾಖೆ ಅಧಿಕಾರಿ ಅಜಯ ಸಿಂಗ್, ಇನ್ನಿತರರು ಉಪಸ್ಥಿತರಿದ್ದರು.