ಸಮಾನತೆ ಸಾರುವ ವಿಶೇಷ ಜಾಗೃತಿ ಕಾರ್ಯಕ್ರಮಗಳ ಆಯೋಜನೆಗೆ ಕ್ರಮ: ಅಧ್ಯಕ್ಷ ಡಾ.ಎಲ್‌.ಮೂರ್ತಿ

  ಸಮಾನತೆ ಸಾರುವ ವಿಶೇಷ ಜಾಗೃತಿ ಕಾರ್ಯಕ್ರಮಗಳ ಆಯೋಜನೆಗೆ ಕ್ರಮ: ಅಧ್ಯಕ್ಷ ಡಾ.ಎಲ್‌.ಮೂರ್ತಿ Action to organize special awareness programs promoting equality: President Dr. L. Murthy

ಧಾರವಾಡ ಡಿ.25: ಸುಸಂಸ್ಕೃತರ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆಯಬಾರದಾಗಿತ್ತು. ದೌರ್ಜನ್ಯ ಪೀಡಿತ ಕುಟುಂಬಕ್ಕೆ ಸೂಕ್ತ ಭದ್ರತೆ, ಅಗತ್ಯ ನೆರವು ನೀಡವಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ ಇಲಾಖೆ ಸೂಕ್ತ ಕ್ರಮವಹಿಸಿದ್ದರಿಂದ ಹೆಚ್ವಿನ ಅನಾಹುತ ತಪ್ಪಿರುವುದು ಅವಲೋಕಿಸಿದಾಗ ಕಂಡುಬಂದಿದೆ. ಕುಟುಂಬಕ್ಕೆ ಭದ್ರತೆ, ಉದ್ಯೋಗ ಮತ್ತು ಪುನರ್ವಸತಿಯ ಅಗತ್ಯವಿದೆ ಎಂದು ದೌರ್ಜನ್ಯಕ್ಕೆ ಒಳಗಾದ ಕುಟುಂಬ ಸದಸ್ಯರು ತಿಳಿಸಿದ್ದಾರೆ.  

ಈ ಕುರಿತು ಸ್ವತಃ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಪ್ರಕರಣದ ಮಾಹಿತಿ ನೀಡಿ, ಪರಿಹಾರ ಕ್ರಮಗಳ ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸುವದಾಗಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟಗಳ ಆಯೋಗದ ಅಧ್ಯಕ್ಷ ಡಾ. ಎಲ್‌.ಮೂರ್ತಿ ಅವರುಹೇಳಿದರು. ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿರುವ ದೌರ್ಜನ್ಯ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಕುಟುಂಬದ ಗಾಯಾಳುಗಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಸಾಂತ್ವನ ತಿಳಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದರು. ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿರುವ ಘಟನೆ ತಿಳಿದು, ದುಃಖವಾಗಿದೆ. ಜಾತಿ ಹೆಸರಿನಲ್ಲಿ ಹೀನ ಕೃತ್ಯವಾಗಿದೆ. ಇದನ್ನು ಆಯೋಗ ಬಲವಾಗಿ ಖಂಡಿಸುತ್ತದೆ ಮತ್ತು ದೌರ್ಜನ್ಯ ಪೀಡಿತರಿಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ದೊರಕಿಸಲು ಕ್ರಮವಹಿಸುತ್ತದೆ ಎಂದು ಅವರು ಹೇಳಿದರು. 

ಘಟನೆಯಲ್ಲಿ ಬಾಧಿತರಾದ ಕುಟುಂಬ ಸದಸ್ಯರಿಗೆ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳು ರೂ.5 ಲಕ್ಷಗಳ ಪರಿಹಾರ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ದೌರ್ಜನ್ಯ ಪೀಡಿತ ಕುಟುಂಬಕ್ಕೆ ದಿನಸಿ, ಆಹಾರ ಸಾಮಗ್ರಿ ವಿತರಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಮತ್ತು ಅಗತ್ಯ ಚಿಕಿತ್ಸೆ ಕೋಡಿಸುತ್ತಿದ್ದಾರೆ. ಪೊಲೀಸ ಇಲಾಖೆಯಿಂದ ಕೃತ್ಯ ನಡೆದ ಗ್ರಾಮದಲ್ಲಿ ಹಾಗೂ ಆಸ್ಪತ್ರೆಯಲ್ಲಿ ಸೂಕ್ತ ಭದ್ರತೆ ನೀಡಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆಯ ಈ ಎಲ್ಲ ತಕ್ಷಣದ ಕ್ರಮಗಳು ಹೆಚ್ಚಿನ ಅನಾಹುತ ತಪ್ಪಿಸಿದ್ದು, ನೋಂದವರಿಗೆ ನ್ಯಾಯದ ಭರವಸೆ ಮೂಡಿಸಿವೆ ಎಂದು ಅಧ್ಯಕ್ಷರು ಅಭಿಪ್ರಾಯಪಟ್ಟರು. 

ಡಿಸೆಂಬರ್ 21 ರಿಂದಲೇ ಪ್ರಕರಣದ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಘಟನೆಗಳು ನಡೆದಿವೆ ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಅಂತರ್ಜಾತಿ ವಿವಾಹದಿಂದ ಉಂಟಾದ ಈ ದುರ್ಘಟನೆ ಮರ್ಯಾದೆ ಹತ್ಯೆಯ ಸ್ವರೂಪ ಪಡೆದುಕೊಂಡಿರುವುದು ಅತ್ಯಂತ ವಿಷಾದನೀಯ ಎಂದು ಅವರು ಹೇಳಿದರು. ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳಿಗೆ ಹೆಸರಾಗಿರುವ ಜಿಲ್ಲೆಯಲ್ಲಿ ಇಂತಹ ಅಸಂಸ್ಕೃತ ಹಾಗೂ ಅಮಾನುಷ ಘಟನೆ ನಡೆದಿರುವುದು ನೋವುಂಟು ಮಾಡುತ್ತದೆ. ಸ್ವಾತಂತ್ರ್ಯ ಪಡೆದು ಹಲವು ದಶಕಗಳು ಕಳೆದರೂ ಸಮಾಜದಲ್ಲಿ ಜಾತೀಯತೆ ಇನ್ನೂ ನಿರಂತರವಾಗಿ ಮುಂದುವರಿಯುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ ಎಂದು ಡಾ. ಎಲ್ ಮೂರ್ತಿ ಅವರು ಅಭಿಪ್ರಾಯಪಟ್ಟರು. 

ಅಂತರ್ಜಾತಿ ವಿವಾಹ ಮಾಡಿಕೊಂಡ ಕಾರಣಕ್ಕೆ ತಂದೆಯೇ ತನ್ನ ಮಗಳನ್ನು ಹತ್ಯೆ ಮಾಡಿರುವುದು ಮಾನವೀಯತೆಯ ಮೇಲಿನ ದಾಳಿ ಮಾತ್ರವಲ್ಲ, ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾದ ಕೃತ್ಯವಾಗಿದೆ. ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಹೊಂದಿಲ್ಲ. ಕಾನೂನು ಕೈಗೆತ್ತಿಕೊಂಡು ಇಂತಹ ಕ್ರೂರ ಘಟನೆಗಳನ್ನು ನಡೆಸುವುದು ಸಮಾಜಕ್ಕೆ ಮಾರಕವಾಗಿದ್ದು, ಇವುಗಳನ್ನು ಯಾವ ಕಾರಣಕ್ಕೂ ಸಹಿಸಬಾರದು ಎಂದು ಅವರು ಹೇಳಿದರು.ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಮಾತನಾಡಿಸಿದ್ದೇನೆ, ನಾನು ಸಹ ಒಬ್ಬ ವೈದ್ಯನಾಗಿ ಪರೀಶೀಲಿಸಿದಾಗ ಅವರಲ್ಲಿ ಇನ್ನೂ ಭಯ ಮತ್ತು ಆತಂಕದ ವಾತಾವರಣ ಇರುವುದನ್ನು ಗಮನಿಸಿದ್ದೇನೆ. ಇಂತಹ ಘಟನೆಗಳು ಜನಸಾಮಾನ್ಯರು, ವಿಶೇಷವಾಗಿ ಮಹಿಳೆಯರಲ್ಲಿ ಅಸುರಕ್ಷಿತ ಭಾವನೆ ಮೂಡಿಸುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. 

ಇಂತಹ ಘಟನೆಗಳು ಯಾವುದೇ ಜಿಲ್ಲೆಯಲ್ಲಿ ಮಾತ್ರವಲ್ಲ, ದೇಶದ ಯಾವುದೇ ಭಾಗದಲ್ಲಿಯೂ ನಡೆಯಬಾರದು ಎಂದು ಡಾ. ಎಲ್ ಮೂರ್ತಿ ಅವರು ಹೇಳಿದರು. ಸಾಮಾಜಿಕ ಸಮಾನತೆ, ಮಾನವ ಗೌರವ ಮತ್ತು ಜಾತಿ ಮುಕ್ತ ಸಮಾಜವನ್ನು ಸಾರಿದ ಬಸವಣ್ಣನವರ ಹಿತಚಿಂತನೆಗಳನ್ನು ಒಳಗೊಂಡಿರುವ ಜಿಲ್ಲೆಗಳಲ್ಲಿಯೇ ಇಂತಹ ಘಟನೆಗಳು ನಡೆದರೆ, ಇನ್ನು ಬೇರೆ ಸ್ಥಳಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಮತ್ತು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು.  

ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ ಇಲಾಖೆ ಮತ್ತು ಸಮಜ ಕಲ್ಯಾಣ ಇಲಾಖೆಯಿಂದ ಸಂಯುಕ್ತವಾಗಿ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಗ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಚಿಕಿತ್ಸೆ ನೀಡುತ್ತಿರುವ ವೈದ್ಯರು ಗಾಯಾಳುಗಳು ಕ್ರಮೇಣ ಗುಣಮುಖರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದ್ದು, ಅಧಿಕಾರಿಗಳ ಬಗ್ಗೆ ಕೆಲವು ದೂರುಗಳು ಸಹ ಬಂದಿರುವುದರಿಂದ ಅವುಗಳನ್ನು ಸ್ವೀಕರಿಸಿ ತನಿಖೆ ಕೈಗೊಂಡು, ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ದೌರ್ಜನ್ಯ ಪೀಡಿತ ಕುಟುಂಬದವರು ಸೂಕ್ತ ನ್ಯಾಯ, ಭದ್ರತೆ, ಹೆಚ್ಚಿನ ಪರಿಹಾರ ಮತ್ತು ವಿವೇಕಾನಂದ ದೊಡ್ಡಮನಿಗೆ ಉದ್ಯೋಗ ಕೊಡಿಸಲು ವಿನಂತಿಸಿದ್ದಾರೆ. ಈ ಕುರಿತು, ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟಗಳ ಆಯೋಗವು ಸರಕಾರಕ್ಕೆ ಸೂಕ್ತ ಶಿಫಾರಸ್ಸುಗಳನ್ನು ಮಾಡುತ್ತದೆ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಸುನೀಲ ಉಕ್ಕಲಿ, ಕಾರ್ಯದರ್ಶಿ ಡಾ.ಎಚ್‌.ಎಸ್‌.ಶಿವರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಸಿಪಿ ಮಾನಿಂಗ ನಂದಾಗಾವಿ, ಡಿವೈಎಸ್‌.ಪಿ ವಿನೋದ ಮುಕ್ತೆದಾರ, ಎಸಿಪಿ ಶಿವಪ್ರಕಾಶ ನಾಯ್ಕ್‌ , ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ. ಪಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ.ಎಚ್‌.ಎಚ್‌.ಕುಕನೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ವಿಜಯಲಕ್ಷ್ಮಿ ಪಾಟೀಲ, ತಹಶಿಲ್ದಾರ ಜೆ.ಬಿ.ಮಜ್ಜಗಿ, ತಾ.ಪಂ. ಇಓ ರಾಮಚಂದ್ರ ಹೊಸಮನಿ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಇನಸ್ಪೆಕ್ಟರಗಳಾದ ಮುರಗೇಶ ಚನ್ನಣ್ಣವರ, ಪ್ರಭು ಗಂಗೆನಹಳ್ಳಿ, ವೀರಭದ್ರ​‍್ಪ ಕಡಿ, ಸಿಡಿಪಿಓ ಅತೀಕಾ ಸಿದ್ದಿ ಹಾಗೂ ವಿವಿಧ ದಲಿತ ಸಂಘಟನೆಗಳ ಪ್ರಮುಖರಾದ ಎಂ.ಅರವಿಂದ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ಪರಮೇಶ ಕಾಳೆ, ಶ್ರೀಧರ, ಕೆಂಚಪ್ಪ ಮಲ್ಲಮ್ಮನವರ ಸೇರಿದಂತೆ ಇತರ ದಲಿತ ಸಂಘಗಳ ಪ್ರಮುಖರು, ಇತರರು ಇದ್ದರು.