ಬೆಂಗಳೂರು, ಮಾ 23, ಬೆಂಗಳೂರು ಮಹಾನಗರದಲ್ಲಿ ಸಿಇಇ ಹಾಗೂ ಸಿಎಫ್‌ಒ ನಿಂದ ಅನುಮತಿ ಪಡೆಯದಿರುವ ಕಾರ್ಖಾನೆ ಹಾಗೂ ಕಟ್ಟಡಗಳ ಮಾಲೀಕರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಮೇಲ್ಮನೆಗೆ ತಿಳಿಸಿದ್ದಾರೆ.ಪ್ರಶ್ನೋತ್ತರ ವೇಳೆ ಕಾಂಗ್ರೆಸಿನ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರಿನಲ್ಲಿ ಕಾನ್ಸೆಂಟ್ ಫಾರ್ ಎಸ್ಟಾಬ್ಲಿಷ್ಮೆಂಟ್ ಹಾಗೂ ಕಾನ್ಸೆಂಟ್ ಫಾರ್ ಆಪರೇಷನ್‌ನಿಂದ ಕಟ್ಟಡ ಕಾಗೂ ಕಾರ್ಖಾನೆಗಳಿಗೆ ಅನುಮತಿಪಡೆಯಬೇಕೆಂಬ ನಿಯಮವಿದೆ. ಒಟ್ಟು ನಗರದಲ್ಲಿ 12,714 ಕಾರ್ಖಾನೆಗಳಲ್ಲಿ 114 ಕಾರ್ಖಾನೆಗಳು ನಿಯಮ ಮುರಿದಿದ್ದು ಇವುಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅನುಮತಿಪಡೆಯದಿರುವ ಜಲ ಮತ್ತು ವಾಯು ಕಾಯಿದೆ ಪ್ರಕಾರ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದರು.ಅಧಿವೇಶನ ಮುಗಿದ ಬಳಿಕ ತಾವೇ ಖುದ್ದು ಭೇಟಿ ನೀಡಿ ನಿಯಮಬಾಹಿರ ಕಟ್ಟಡಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆ ಇಲಾಖೆ ಕಾರ್ಯನಿರ್ವಹಿಸುತ್ತದೆ. ಹಸಿರು ನ್ಯಾಯಾಧೀಕರಣ ಅನುಮತಿ ಪಡೆಯಬೇಕು. ಅನುಮತಿ ಪಡೆಯದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಕಾಂಗ್ರೆಸ್‌ನ ಪಿ.ಆರ್.ರಮೇಶ್ ಮಾತನಾಡಿ, ಅನಧಿಕೃತ ಕಟ್ಟಡಗಳಿಂದ ಪರಿಸರ ಮೇಲೆ ದುಷ್ಪರಿಣಾಮ ಬೀರಿದೆ. ಇರುವ ಕೆರೆಗಳಲ್ಲಿ ಕಸ ತಂದು ಸುರಿಯುತ್ತಿರುವುದರಿಂದ ಜನರಿಗೆ ಗಾಳಿ ನೀರು ಸಿಗದಾಗಿದೆ. ಆದ್ದರಿಂದ ಈ ಬಗ್ಗೆ ಸಮಗ್ರ ಪರಿಶೀಲನೆಗೆ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಇದಕ್ಕೆ ಜೆಡಿಎಸ್ ನ ರಮೇಸ್ ಗೌಡ ಧ್ವನಿಗೂಡಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಭ್ರಷ್ಟಾಚಾರ ಲಂಚಗುಳಿತನ ತಾಂಡವಾಡುತ್ತಿದೆ. ಕೈ ಬೆಚ್ಚಗೆ ಮಾಡದೇ ಇದ್ದರೆ ಕೆಲಸ ಆಗುತ್ತಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸದನದಲ್ಲಿ ಆಗ್ರಹಿಸಿದರು.