ಸಾಧನೆ ಸಾಧಕನ ಸ್ವತ್ತು ಹೊರತು ಸೋಮಾರಿಯದ್ದಲ್ಲ: ಯಲಿಗಾರ
Achievement is the property of the achiever, not the lazy: Yaligara
ವಿಜಯಪುರ 18: ಈ ಜಗತ್ತಿನಲ್ಲಿ ಎಲ್ಲವನ್ನು ಸಾಧಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ಯಾವ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಾನೋ ಆತನು ಮಾತ್ರ ಸಾಧಕನಾಗಿ ಹೊರ ಹೊಮ್ಮುತ್ತಾನೆ. ಸಾಧನೆ ಎಂಬುದು ಸಾಧಕನ ಸ್ವತ್ತಾಗಿರುತ್ತದೆಯೇ ಹೊರತು ಯಾವತ್ತೂ ಸೋಮಾರಿಯ ಸ್ವತ್ತಾಗಿ ಇರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ತನ್ನ ಸಾಮರ್ಥ್ಯವನ್ನು ಸದ್ಭಳಕೆ ಮಾಡಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2025 ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪುಸ್ತಕ ಲೋಕಾರೆ್ಣ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು; ಇಂದು ವಿದ್ಯಾರ್ಥಿಗಳು ಸಣ್ಣ ಸಣ್ಣ ಸೋಲುಗಳಿಗೆ ಕುಗ್ಗಿ ಹೋಗುತ್ತಾರೆ. ಈ ಕಾರಣದಿಂದಾಗಿ ದೊಡ್ಡ ಮಟ್ಟದ ಯಶಸ್ಸು ಪಡೆದುಕಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಾರಣ ಇಲ್ಲಿಯ ವರೆಗೂ ನಾವು ಕೇವಲ 5ಅ ಮಾತ್ರ ನಮ್ಮನ್ನು ಅರ್ಥ ಮಾಡಿಕೊಂಡಿದ್ದೇವೆ. ಇನ್ನೂ ಶೇ.95 ನಮಗೆ ನಾವೇ ಅರ್ಥವಾಗದೇ ಉಳಿದಿದ್ದೇವೆ. ಹೀಗಾಗಿಯೇ ನಾವು ಬೇರೆಯವರನ್ನು ನಂಬಿದಷ್ಟು ನಮ್ಮನ್ನು ತಾವು ನಂಬುತ್ತಿಲ್ಲ. ಎಲ್ಲಿಯವರೆಗೂ ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಅಂದುಕೊಂಡಿದ್ದನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಸತತ ಪರಿಶ್ರಮ ಪಟ್ಟಾಗ ಮಾತ್ರ ಗೆಲುವು ದಕ್ಕುತ್ತದೆ. ಯಶಸ್ಸು ಎಂದರೆ ಅದು ರಾತ್ರೋ ರಾತ್ರಿ ಜರುಗುವ ಪವಾಡವಲ್ಲ. ಎಷ್ಟೋ ವರ್ಷಗಳ ತಪ್ಪಸ್ಸಿನ ಒಟ್ಟು ಮೊತ್ತವಾಗಿರುತ್ತದೆ ಎಂದು ಹೇಳಿದ ಅವರು ಬರೀ ಇಂಜೀನೀಯರ್ ಡಾಕ್ಟರ್ ಎನ್ನುವ ಕಡೆ ಗೋಲು ನಿಗದಿ ಪಡಿಸಿಕೊಳ್ಳದೇ ಬೇಸಿಕ್ ಸೈನ್ಸ ಕಡೆಗೂ ಗಮನ ಹರಿಸಿದಲ್ಲಿ ವಿಫುಲ ಅವಕಾಶಗಳ ಜೊತೆಗೆ ಉತ್ತಮ ಭವಿಷ್ಯ ದೊರೆಯುತ್ತದೆ ಎಂದು ಹೇಳಿದರು.
ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊಟೇಲ್ ಉದ್ಯಮಿ ಶಾಂತೇಶ ಕಳಸಗೊಂಡ ಸ್ವಾಮಿ ವಿವೇಕಾನಂದರು ಶಕ್ತಿಯೇ ಜೀವನ ನಿಶ್ಯಕ್ತಿಯೇ ಮರಣ ಎಂದು ಹೇಳಿದ್ದಾರೆ. ಹೀಗಾಗಿ ನನ್ನಿಂದ ಆಗುವುದಿಲ್ಲ ಎಂದು ಕುಳಿತುಕೊಂಡರೆ ಯಾವುದನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಹೋಟೆಲ್ ಕ್ಲೀನರ್ ಆಗಿ ಇಷ್ಟೇ ನನ್ನ ಜೀವನ ಎಂದುಕೊಂಡು ಕೂತಿದ್ದರೆ ಶಾಂತೇಶ ಕಳಸಗೊಂಡ ಒಬ್ಬ 22 ಹೊಟೆಲ್‌ಗಳ ಮಾಲೀಕನಾಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಧನಾತ್ಮಕ ವಿಚಾರಧಾರೆಗಳು. ನೀವು ಧನಾತ್ಮಕವಾಗಿ ಚಿಂತನೆ ಮಾಡಿದರೆ ಬದುಕಿನಲ್ಲಿ ಯಶಸ್ಸು ಕಾಣುತ್ತೀರಿ ಎಂದು ಹೇಳಿದರು.
ಆಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅವರು; ಸತ್ಯ ಶೋಧನೆಯ ದಾರಿಯಲ್ಲಿ ಹೊರಟ ಸಿದ್ಧಾರ್ಥ ನನ್ನಿಂದ ಆಗದು ಎಂದು ಮರಳಿ ಬಂದಿದ್ದರೆ ಬುದ್ಧನಾಗುತ್ತಿರಲಿಲ್ಲ. ನಾನು ಚಿಕ್ಕವನಿದ್ದೇನೆ ನನ್ನಿಂದ ಏನಾಗುತ್ತದೆ ಎಂದು ಹಿಂದೆ ಹೆಜ್ಜೆ ಇಟ್ಟಿದ್ದರೆ ವೈಭವ್ ಸೂರ್ಯವಂಶಿ ಎನ್ನುವ ಹದಿನಾಲ್ಕರ ಪೋರ ಐಪಿಎಲ್ ನಲ್ಲಿ ದಾಖಲೆ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಚಾಂಪಿಯನ್‌ಗಳ ಎದುರು ನಾನೇನು ಮಾಡುವದಕ್ಕೆ ಸಾಧ್ಯವಾಗುತ್ತದೆ ಎಂದು ಕೈಕಟ್ಟಿ ಕೂತಿದ್ದರೆ ಗುಕೇಶ್ ಚದುರಂಗದ ಚಾಂಪಿಯನ್ ಆಗಿ ಹೊರ ಹೊಮ್ಮುವುದಕ್ಕೆ ಆಗುತ್ತಿರಲಿಲ್ಲ. ಹಾಗೆಯ ಇಂದು ಆ ವಿಷಯ ಕಠಿಣವಿದೆ ಈ ವಿಷಯ ಕಬ್ಬಿಣದ ಕಡಲೆಯಾಗಿದೆ ಎಂದುಕೊಂಡು ಕೂತರೆ ಕಾಲೇಜು ಶಿಕ್ಷಣ ಪೂರೈಸುವುದಕ್ಕೆ ಸಾಧ್ಯವಿಲ್ಲ. ಎಲ್ಲಿ ಕಠಿಣತೆ ಇದೆಯೋ ಅಲ್ಲಿ ಶ್ರೇಷ್ಠತೆ ಇರುತ್ತದೆ. ಕಠಿಣತೆಯನ್ನು ಬೇಧಿಸಿದಲ್ಲಿ ಶ್ರೇಷ್ಠತೆ ಹೊರ ಹೊಮ್ಮುತ್ತದೆ ಆ ನಿಟ್ಟಿನಲ್ಲಿ ನೀವು ಎದೆಗುಂದದೆ ಮುನ್ನಗ್ಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಮಾತನಾಡಿದರು. ಎಕ್ಸಲಂಟ್ ಪ್ರಕಾಶನ ಸಂಸ್ಥೆಯ ಪುಸ್ತಕಗಳನ್ನು ಲೋಕಾರೆ್ಣಗೊಳಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಸ್ವಾಗತಿಸಿದರು, ಆಂಗ್ಲ ವಿಭಾಗದ ಉಪನ್ಯಾಸಕ ಶ್ರದ್ಧಾ ಜಾಧವ ನಿರೂಪಿಸಿದರು, ಮುಸ್ತಾಕ ಮಲಘಾಣ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 