ಕೇಂದ್ರ ದಿಂದ ಅಧಿಕಾರ ದುರುಪಯೋಗ:ಸಿದ್ದರಾಮಯ್ಯ ಆರೋಪ

 ಮೈಸೂರು, ಆ30      ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ  ಡಿ ಕೆ ಶಿವಕುಮಾರ್ ಅವರಿಗೆ ಸಮನ್ಸ್ ಜಾರಿಗೊಳಿಸುವ ಮೂಲಕ ಕೇಂದ್ರ ಸರಕಾರ ರಾಜಕೀಯ ಕಾರಣಗಳಿಗಾಗಿ ಅಧಿಕಾರ ದುರುಪಯೋಗ ಪಡಿಕೊಳ್ಳುತ್ತಿದೆ ಎಂದು  ಮಾಜಿ ಮುಖ್ಯಮಂತ್ರಿ ನಾಯಕ ಸಿದ್ದರಾಮಯ್ಯಆರೋಪಿಸಿದ್ದಾರೆ.   ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ ಆಡಳಿತದಲ್ಲಿ ಸಹಜ   ನ್ಯಾಯ ಎಂಬುದು  ಕಾಣೆಯಾಗಿದೆ. ಶಿವಕುಮಾರ್ ಕಾನೂನು ಹೋರಾಟ ನಡೆಸುತ್ತಿದ್ದು, ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದರಿಂದ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ.  ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪ್ರಕರಣವು ಸಹ ಸಹಜ  ನ್ಯಾಯದ ಪ್ರಕಾರ ಅವರನ್ನು ಬಂಧಿಸುವ ಮಟ್ಟಿಗೆ ಇರಲಿಲ್ಲ ಆದರೂ  ಕೇಂದ್ರ  ಸರಕಾರ ಎಲ್ಲವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ದೂರಿದರು.   ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದ್ದರೂ ಕೇಂದ್ರ  ಪರಿಹಾರ ಕಾರ್ಯಗಳಿಗೆ ಒಂದೇ ಒಂದು ರೂಪಾಯಿ ಹಣ ಬಿಡುಗಡೆ  ಮಾಡಿಲ್ಲ ಎಂದರು. ಕಾಂಗ್ರೆಸ್ ಮುಖಂಡರು ರಾಜ್ಯಪಾಲ ವಾಜುಭಾಯ್ ವಾಲಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ  ಸಮರೋಪಾದಿಯಲ್ಲಿ  ಪರಿಹಾರ ಕಾರ್ಯ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ, ಈ ಸಂಬಂಧ  ಬೆಂಗಳೂರಿನಲ್ಲಿ ನಿನ್ನೆ  ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ ಎಂದರು.  ಕೇಂದ್ರ ಸರ್ಕಾರವು ಮಲತಾಯಿ ಧೋರಣೆ  ಮುಂದುವರಿಸಿ  ಹಣ ಬಿಡುಗಡೆ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದ ಉದ್ದಗಲಕ್ಕೂ ಹೋರಾಟ  ತೀವ್ರಗೊಳಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.