ಶಾಲೆಗೆ ಗೈರು ಆಗಿ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿ: ಚರ್ಚೆಗೆ ಗ್ರಾಸ್

Absence from school, teachers involved in protest

ರಾಯಬಾಗ 29: ಮಕ್ಕಳಿಗೆ ಪಾಠ ಮಾಡಬೇಕಾಗಿರುವ ಶಿಕ್ಷಕರು, ಶಾಲೆಗೆ ಗೈರು ಆಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಎಷ್ಟು ಸರಿ ಎಂದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಬುಧವಾರ ಪಟ್ಟಣದ ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರ ಸಂಘದ ಕಚೇರಿ ಮುಂಭಾಗದಲ್ಲಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಲಿಕಲಿ ಶಿಕ್ಷಕರು ಸೇರಿ ನೂರಾರು ಶಿಕ್ಷಕರು ಶಾಲೆಯ ವೇಳೆಯಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.  

ಹಿನ್ನಲೆ : ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘಕ್ಕೆ ಚುನಾವಣೆಯ ದಿನಾಂಕ ನಿಗದಿಯಾಗಿ ತಿಂಗಳು ಕಳೆದರೂ ಇನ್ನುವರೆಗೆ ಮತದಾರರ ಪಟ್ಟಿಯನ್ನು ಪ್ರಕಟಿಸದಿ+*ುವುದೇ ಈಗಿನ ಆಡಳಿತ ಮಂಡಳಿಯವರು ಶಿಕ್ಷಕರಲ್ಲಿ ಗೊಂದಲ ಮೂಡಿಸುವ ಕಾರ್ಯ ನಡೆಯುತ್ತಿರುವುದಾಗಿ ಶಿಕ್ಷಕರ ಸಂಘವೊಂದು ಆರೋಪಿಸಿದೆ.  ಇತ್ತೀಚೆಗೆ ನೇಮಕವಾದ ಶಿಕ್ಷಕರು ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇಲ್ಲವೆಂದು ಒಂದು ಶಿಕ್ಷಕರ ಗುಂಪು ವಾದ ಮಾಡಿದೆ. ಇನ್ನೊಂದು ಶಿಕ್ಷಕರ ಗುಂಪು ಮತದಾನದ ಹಕ್ಕು ಕೊಡುವಂತೆ ಆಗ್ರಹಿಸಿದೆ. ಈ ಹಿಂದೆ ಹೊಸದಾಗಿ ನೇಮಕವಾದ ಶಿಕ್ಷಕರಿಗೆ ಮತದಾನ ಮಾಡಲು ನಿರಾಕರಿಸಿದ ಸಂಘದ ಕಾರ್ಯದರ್ಶಿಗಳು, ಈ ಸಲ ಹೊಸದಾಗಿ ನೇಮಕವಾದ ಶಿಕ್ಷಕರ ಯಾದಿಯನ್ನು ಡಿಆರ್ ಆಫೀಸ್ ಬೆಳಗಾವಿಗೆ ಕಳುಹಿಸಿ ಕೊಟ್ಟು ಮತದಾನಕ್ಕೆ ಅವಕಾಶ ಮಾಡಿಕೊಟ್ಟು ಗೊಂದಲ ಮೂಡಿಸಿರುವ ಕಾರ್ಯದರ್ಶಿ ನಡೆಯನ್ನು ವಿರೋಧಿಸಿ ಶಿಕ್ಷಕರ ಗುಂಪೊಂದು ಪ್ರತಿಭಟನೆ ನಡೆಸಿದ ವಿಷಯ ಬೆಳಕಿಗೆ ಬಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಈ ಪ್ರತಿಭಟನೆಯಲ್ಲಿ ನೂರಾರು ಶಿಕ್ಷಕರು ತಮ್ಮ ತರಗತಿಗಳಿಗೆ ಅನಧಿಕೃತವಾಗಿ ಗೈರ ಆಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನೂ ಕೆಲ ಶಿಕ್ಷಕರು ಹಾರೂಗೇರಿಯಲ್ಲಿ ನಲಿಕಲಿ ತರಬೇತಿಗೆ ಹಾಜರಾಗದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅತ್ತ ತರಬೇತಿಗೆ ಹೋಗುವುದಾಗಿ ತಮ್ಮ ತಮ್ಮ ಶಾಲೆಯಲ್ಲಿ ಬಿಡುಗಡೆ ಆದೇಶ ಪಡೆದು, ಇತ್ತ ತರಬೇತಿಗೂ ಹಾಜರಾಗದೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದಾಗಿ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳು ಕುಲಂಕಷ ತನಿಖೆ ನಡೆಸಿ, ಸತ್ಯಾಂಶ ಎನು ಎಂಬುದನ್ನು ತಿಳಿಸಬೇಕಿದೆ. ತಾಲೂಕಿನಲ್ಲಿ ಕೆಲ ಶಾಲೆ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಪ್ರತಿಭಟನೆ ಮತ್ತು ರಾಜಕೀಯ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ಚರ್ಚೆಯ ವಿಷಯವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಒತ್ತಾಯ ಆಗಿದೆ.   

ಬುಧವಾರ ನಡೆದ ಶಿಕ್ಷಕರ ಪ್ರತಿಭಟನೆ ಬಗ್ಗೆ ರಾಯಬಾಗ ಬಿಇಒ ಬಸವರಾಜಪ್ಪ ಅವರನ್ನು ಸಂಪರ್ಕಿಸಿದಾಗ ಅವರು ಸರಿಯಾದ ಯಾವುದೇ ಉತ್ತರ ನೀಡದೇ, ತಾವು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಾಗಿ ಹೇಳಿ ಕರೆಗೆ ಸ್ಪಂದಿಸದೇ ಬೇಜವಾಬ್ದಾರಿ ತೋರಿದರು.