ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು: ಲಕ್ಷ್ಮೀ ಹೆಬ್ಬಾಳಕರ್

ಅನಗತ್ಯವಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು

ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು:  ಲಕ್ಷ್ಮೀ ಹೆಬ್ಬಾಳಕರ್  

 ವಿಜಯಪುರ 27 : ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಅನಗತ್ಯವಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ  ಹೇಳಿಕೆ ಕುರಿತಂತೆ ವಿಜಯಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ದೇಶದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗೂ ಒಂದೇ ಕಾನೂನು, ಜನಸಾಮಾನ್ಯರಿಗೂ ಒಂದೇ ಕಾನೂನು. ಸ್ವಾಮೀಜಿಯವರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಇಂತಹ ಹೇಳಿಕೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದರು.* *ಪಂಚಮಸಾಲಿ ಸಮಾಜದ ಜೊತೆಗಿದ್ದೇನೆ* ನಾನು ಕರ್ನಾಟಕದ ಮಂತ್ರಿಯಾಗಿದ್ದರೂ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಈಗಲೂ ಸಕ್ರಿಯವಾಗಿರುವೆ. ಮಂತ್ರಿಯಾಗಿರುವ ಕಾರಣ ಕೆಲಸದ ಒತ್ತಡದಿಂದಾಗಿ ಮೀಸಲಾತಿ ಹೋರಾಟದ ಒಂದೆರಡು ಸಭೆಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ನನ್ನ ತಮ್ಮ ಹಾಗೂ ನನ್ನ ಮಗ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು. ಪಂಚಮಸಾಲಿ ಸಮಾಜ ಸದಾ ನನ್ನೊಂದಿಗಿದೆ. ನಾನು ಕೂಡ ಯಾವಾಗಲೂ ಸಮಾಜದ ಜೊತೆ ಇರುವೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಾಲ್ಕು ಭಾರಿ ಭೇಟಿಯಾಗಿದ್ದೆವು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರನ್ನು ಈಗಾಗಲೇ ಮೂರು ಬಾರಿ ಭೇಟಿ ಮಾಡಲಾಗಿದೆ. ನಮ್ಮ ಸಮಾಜಕ್ಕೆ ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದರು.ಸಚಿವ ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಮಾತನಾಡಲು ನಾನು ಪಕ್ಷದ ಅಧ್ಯಕ್ಷೆಯೂ ಅಲ್ಲ, ಹೈಕಮಾಂಡ್ ಕೂಡ ಅಲ್ಲ ಎಂದು ಸಚಿವರು ಹೇಳಿದರು.