ಮಾತೃಪೂರ್ಣ ಯೋಜನೆ ಮುಂದುವರೆಸುವಂತೆ‌ ಆಮ್ ಆದ್ಮಿ ಪಕ್ಷದ ಆಗ್ರಹ

ಬೆಂಗಳೂರು, ಮೇ 22,  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯ ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ, ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದ  ಹಿತದೃಷ್ಟಿಯಿಂದ ರೂಪಿಸಿದ್ದ ಮಾತೃಪೂರ್ಣ ಯೋಜನೆಯನ್ನು ಹಣದ ಕೊರತೆಯ ನೆಪವೊಡ್ಡಿ ಈಗಿ  ಬಿಜೆಪಿ ರಾಜ್ಯ ಸರ್ಕಾರ ಅನುದಾನ ನಿಲ್ಲಿಸುತ್ತಿರುವುದು ಬಡವರು ಮತ್ತು ಮಹಿಳಾ ವಿರೋಧಿ  ನೀತಿ ಆಗಿದೆ ಎಂದು ಆಮ್ ಆದ್ಮಿ ಪಕ್ಷ(ಆಪ್) ಟೀಕಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಎಎಪಿ ಬೆಂಗಳೂರು ನಗರ ಘಟಕ ಅಧ್ಯಕ್ಷ  ಮೋಹನ್ ದಾಸರಿ, 2019 ರ ಏಪ್ರಿಲ್  ತಿಂಗಳಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕರ್ನಾಟಕದ  ಸಣ್ಣ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚು ಎನ್ನುವ ಅಂಶವನ್ನು ಪ್ರಮುಖವಾಗಿ ಉಲ್ಲೇಖ  ಮಾಡಿತ್ತು. ಇದನ್ನು ಕಡಿಮೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ  ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಮತ್ತು ಆರೋಗ್ಯ ಮಟ್ಟ ಸುಧಾರಿಸಲು ಮಾತೃಪೂರ್ಣ  ಯೋಜನೆ ಅತ್ಯಂತ ಪ್ರಯೋಜನಕಾರಿಯಾಗಿತ್ತು. ಈ ಯೋಜನೆ ಬಂದ ಮೇಲೆ ಗರ್ಭಿಣಿ ಹೆಣ್ಣು ಮಕ್ಕಳ  ಪೌಷ್ಟಿಕತೆ ಹೆಚ್ಚಾಗಿ ಗರ್ಭಿಣಿಯರ ಹಾಗೂ ಬಾಣಂತಿಯರ ಸಾವು ಕಡಿಮೆ ಆಗಿತ್ತು ಎಂದು  ಸರ್ಕಾರದ ಸಮೀಕ್ಷೆಯೆ ತಿಳಿಸಿತ್ತು ಎಂದು ತಿಳಿಸಿದ್ದಾರೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ  ಸರ್ಕಾರವು ಮಾತೃಪೂರ್ಣ ಯೋಜನೆಯನ್ನು ಕೈಬಿಡುವ ನಿರ್ಧಾರದಿಂದ ಯಾರ ಜೇಬಿನ ಹಣವನ್ನು  ಉಳಿಸಲು ಸರ್ಕಾರ ಮುಂದಾಗಿದೆ ಎನ್ನುವುದು ತಿಳಿಯುತ್ತಿಲ್ಲ.
ಪ್ರಸ್ತುತ  ರಾಜ್ಯದಲ್ಲಿ 4.20 ಲಕ್ಷ ಗರ್ಭಿಣಿಯರು, 4.05 ಲಕ್ಷ ಬಾಣಂತಿಯರು ಇದ್ದು ಒಟ್ಟಾರೆ 8.30  ಲಕ್ಷ ಫಲಾನುಭವಿಗಳಿಗೆ ಈ ಯೋಜನೆ ತಲುಪುತ್ತಿತ್ತು. ಆದರೆ ಕಳೆದ ಎರಡು ತಿಂಗಳಲ್ಲಿ 1250  ಮಕ್ಕಳು ಮೃತಪಟ್ಟಿರುವುದು ನೋಡಿದರೆ ಆತಂಕವಾಗುತ್ತಿದೆ. ಇಷ್ಟಾದರೂ ಸಹ ಸರ್ಕಾರ ಹೃದಯ  ಹೀನರಂತೆ ವರ್ತಿಸುತ್ತಿರುವುದು ತರವಲ್ಲ.  ಆದ್ದರಿಂದ ಮಾತೃಪೂರ್ಣಯೋಜನೆಯನ್ನು  ಮುಂದುವರಿಸುವಂತೆ ಅವರು ಒತ್ತಾಯಿಸಿದ್ದಾರೆ.
ಸಮೀಕ್ಷೆ ಒಂದರ ಪ್ರಕಾರ  ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ,  ರಾಯಚೂರು, ಬೀದರ್, ತುಮಕೂರು ಹೀಗೆ ಕರ್ನಾಟಕದ ಒಂದಷ್ಟು ಜಿಲ್ಲೆಗಳಲ್ಲಿ ಅಗತ್ಯ  ಪೌಷ್ಟಿಕಾಂಶಗಳ ಕೊರತೆಯಿಂದ ಹೆಚ್ಚಿನ ಹೆಣ್ಣುಮಕ್ಕಳು ಬಳಲುತ್ತಿದ್ದಾರೆ.  ಕೊರೊನಾ  ನೆಪದಲ್ಲಿ ಈ ಯೋಜನೆಯ ನೆರವು ಸಿಗದೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯೊಂದರಲ್ಲೆ  ಸುಮಾರು 65 ಕ್ಕೂ ಹೆಚ್ಚು ಹಸುಗೂಸುಗಳು ಏಪ್ರಿಲ್ ತಿಂಗಳಲ್ಲಿ ಸಾವನ್ನಪ್ಪಿರುವುದು  ತಿಳಿದಿದ್ದರೂ ಸಹ ಸರ್ಕಾರ ಹೃದಯ ಹೀನರಂತೆ ವರ್ತಿಸುತ್ತಿರುವುದು ಮುಖ್ಯಮಂತ್ರಿಗಳಾದ  ಯಡಿಯೂರಪ್ಪ ಅವರ ಘನತೆಗೆ ಶೋಭೆಯಲ್ಲ ಎಂದು ದಾಸರಿ  ಆರೋಪಿಸಿದ್ದಾರೆ.
ರಾಯಚೂರು ಜಿಲ್ಲೆಯೊಂದರಲ್ಲೆ 2017 ಮತ್ತು 18 ರಲ್ಲಿ  ಕ್ರಮವಾಗಿ 173, 411 ಮಕ್ಕಳು ಸಾವನ್ನಪ್ಪಿದ್ದಾವೆ. ತಮ್ಮ ಜಿಲ್ಲೆಗಳ ವಾಸ್ತಾವಾಂಶದ  ಅರಿವಿದ್ದ ಅಧಿಕಾರಿಗಳು ಹಸುಗೂಸುಗಳ ಪ್ರಾಣ ಉಳಿಸಲು ನಯಾಪೈಸೆಯಷ್ಟು ಶ್ರಮ ಪಡದೆ ಅನುದಾನ  ಕಡಿತಗೊಂಡರೂ ಸರ್ಕಾರಕ್ಕೆ ಮನವಿ ಮಾಡದೆ ಕುಳಿತಿರುವುದು ನೋಡಿದರೆ ವ್ಯವಸ್ಥೆ ಎಷ್ಟು  ಹೃದಯಹೀನವಾಗಿದೆ ಎಂಬುದು ತಿಳಿಯುತ್ತದೆ.
ತಾಲ್ಲೂಕು ಕೇಂದ್ರಗಳಲ್ಲೂ ನೊಂದ  ಮಹಿಳೆಯರಿಗೆ ಭರವಸೆ, ಆಶ್ರಯ, ಸಾಂತ್ವನ ನೀಡುತ್ತಿದ್ದ ಸಾಂತ್ವನ ಕೇಂದ್ರಗಳನ್ನು  ಮುಚ್ಚಲು ಹೊರಟಿತ್ತು. ಇದಕ್ಕೆ ರಾಜ್ಯದ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ  ಹಿನ್ನೆಲೆಯಲ್ಲೆ ನಿರ್ಧಾರವನ್ನು ಹಿಂಪಡೆಯಿತು. ಅದೇ ರೀತಿ ಮಾತೃಪೂರ್ಣ ಯೋಜನೆಯು ಅನೇಕ  ಹೆಣ್ಣುಮಕ್ಕಳಿಗೆ ಸಹಕಾರಿಯಾಗಿದ್ದು ಮುಂದುವರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.