ನವದೆಹಲಿ, ಏ 22, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಹಾಗೂ ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಕಡ್ಡಾಯ ಆಧಾರ್ ಜೋಡಣೆ ನಿಯಮಾವಳಿಯನ್ನು ತಾತ್ಕಾಲಿಕವಾಗಿ ಸಡಿಲಿಸಲು ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ಸಮ್ಮತಿಸಿದೆ. ಆಧಾರ್ ಜೋಡಣೆ ಮಾಡದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ 2021 ರ ಮಾರ್ಚ್ 31 ರವರೆಗೆ ನೆರವನ್ನು ನೀಡಲು ಸಂಪುಟ ಸಮಿತಿ ಸಮ್ಮತಿಸಿದೆ.ಸಂಪುಟ ಸಭೆಯ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ದೇಶಾದ್ಯಂತ ಈ ಕೃಷಿ ಸಮ್ಮಾನ್ ಯೋಜನೆ ಕೆಲವರನ್ನು ಹೊರತುಪಡಿಸಿ ಎಲ್ಲಾ ಭೂಮಿ ಒಡೆತನದ ಕೃಷಿ ಕುಟುಂಬಗಳಿಗೆ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಸ್ಸಾಂ ಮತ್ತು ಮೇಘಾಲಯ ರಾಜ್ಯ ಹಾಗೂ ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಫಲಾನುಭವಿಗಳ ಆಧಾರ್ ಜೋಡಣೆ ಕಾರ್ಯಕ್ಕೆ ಇನ್ನಷ್ಟು ಸಮಯದ ಅಗತ್ಯವಿದ್ದು 2020 ರ ಏಪ್ರಿಲ್ 1 ರಿಂದ ಈ ಪ್ರದೇಶಗಳ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದ ಕಾರಣ ಆಧಾರ್ ಜೋಡಣೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.ಈ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರೈತರ ಖಾತೆಗಳಿಗೆ 2020 ರ ಏಪ್ರಿಲ್ 8 ರಂದು ಮೊದಲ ಕಂತಿನ ಹಣ ಜಮೆ ಮಾಡಲಾಗಿದೆ. ಅಸ್ಸಾಂ ನಲ್ಲಿ 27,09,586, ಮೇಘಾಲಯದಲ್ಲಿ 98,915, ಜಮ್ಮು ಕಾಶ್ಮೀರ ಮತ್ತು ಲಡಾಖ್ ಗಳಲ್ಲಿ 10,01,668 ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಜಮೆ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ 2019 ರ ಫೆಬ್ರವರಿ 24 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಚಾಲನೆ ನೀಡಿದರು.ಈ ಯೋಜನೆಯಡಿ ಮೂರು ಕಂತುಗಳಲ್ಲಿ ವಾರ್ಷಿಕವಾಗಿ ಆರು ಸಾವಿರ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ.