ಬೆಂಗಳೂರು, ಆ 31 ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್ ಕಾರ್ಡನ್ನು ಇನ್ನು ಮುಂದೆ ಮದ್ಯ ಖರೀದಿಗೂ ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ ಯಾರು ಎಷ್ಟು ಮದ್ಯ ಸೇವಿಸುತ್ತಾರೆ, ಎಷ್ಟು ಖರೀದಿಸುತ್ತಾರೆ ಎನ್ನವುದಕ್ಕಲ್ಲ, ಬದಲಿಗೆ ಮದ್ಯದ ಬಾಟಲಿ ಮತ್ತು ಟೆಟ್ರಾ ಪ್ಯಾಕ್ ಗಳಿಂದ ಉಂಟಾಗುತ್ತಿರುವ ಮಾಲೀನ ತಡೆಗಟ್ಟುವ ಉದ್ದೇಶದಿಂದ ಇಂತಹ ಹಕ್ಕೊತ್ತಾಯ ಬಲವಾಗಿದೆ.
ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಮಹತ್ವದ ಸೂಚನೆ ನೀಡಿದೆ.
ಸರ್ಕಾರದ ನಿರ್ದೇಶನ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಇಲಾಖಾ ಆಯುಕ್ತರಿಗೆ ಪತ್ರ ಬರೆದು ಜಿಲ್ಲಾ ಕೇಂದ್ರಗಳಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಟೆಟ್ರಾಪ್ಯಾಕ್ ಹಾಗೂ ಬಾಟಲಿಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ಮದ್ಯ ಖರೀದಿಗೆ ಆಧಾರ್ ಕಡ್ಡಾಯಗೊಳಿಸುವುದು ಸೇರಿದಂತೆ 7 ಪ್ರಮುಖ ಸಲಹೆಗಳನ್ನು ಹಕ್ಕೊತ್ತಾಯ ರೂಪದಲ್ಲಿ ಸಲ್ಲಿಸಿದೆ.
ನಿರ್ಜನ ಪ್ರದೇಶ, ಮೈದಾನ, ಉದ್ಯಾನವನ, ಸಾರ್ವಜನಿಕ ಸ್ಥಳಗಳು, ಪಾರ್ಕಿಂಗ್ ಪ್ರದೇಶ, ಕೆರೆ, ನದಿ, ಜಲಮೂಲಗಳಲ್ಲಿ ಎಲ್ಲೆಂದರಲ್ಲಿ ಕುಡಿದು ಬೇಕಾಬಿಟ್ಟಿ ಈ ಟೆಟ್ರಾ ಪ್ಯಾಕ್ ಗಳು ,ಮದ್ಯದ ಬಾಟಲಿಗಳನ್ನು ಬಿಸಾಡಲಾಗುತ್ತಿದೆ.ಇವು ಜಲಮೂಲಗಳನ್ನು ತಲುಪಿ ಪರಿಸರಕ್ಕೆ ಹಾಗೂ ಜನ, ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ಜತೆಗೆ ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ. ಹೀಗಾಗಿ ಇದನ್ನು ತಡೆಗಟ್ಟಲು ಆಧಾರ್ ಕಡ್ಡಾಯಗೊಳಿಸಬೇಕು. ಹೀಗೆ ಮಾಡಿದರೆ ಮದ್ಯ ಬಾಟಲು, ಟೆಟ್ರಾಪ್ಯಾಕ್ ಖರೀದಿದಾರನನ್ನು ಜವಾಬ್ದಾರರನ್ನಾಗಿ ಮಾಡಬಹುದು ಎಂಬ ಸಲಹೆ ಇದೆ.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಅಬಕಾರಿ ಆಯುಕ್ತರು ರಾಜ್ಯದ ಎಲ್ಲಾ ಉಪ ಆಯುಕ್ತರಿಗೆ ಸಂದೇಶ ರವಾನಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹಿಂಬರಹ ನೀಡುವಂತೆ ತಿಳಿಸಿದ್ದಾರೆ. ಅದರಂತೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಬಕಾರಿ ನಿರೀಕ್ಷಕರು ಆಯುಕ್ತರಿಗೆ ಹಿಂಬರಹ ಸಲ್ಲಿಸಿದ್ದು ಅದರಲ್ಲಿ ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಲಹೆಗಳಲ್ಲಿ ಕೆಲವು ಹಾಸ್ಯಾಸ್ಪದವಾಗಿವೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಮನವಿಗಳೇನು :
ಙ ಮದ್ಯದ ಅಂಗಡಿಯವರು ಗ್ರಾಹಕನ ಆಧಾರ್ ಪಡೆದು ಮದ್ಯವನ್ನು ನೀಡಬೇಕು
ಙ ಒಮ್ಮೆ ಮದ್ಯ ಖರೀದಿಸಿದ ವ್ಯಕ್ತಿ ಮತ್ತೆ ಮದ್ಯ ಖರೀದಿಸಲು ಬಂದಾಗ ಹಳೆಯ ಬಾಟಲಿ, ಟೆಟ್ರಾಪ್ಯಾಕ್ ವಾಪಸ್ ನೀಡಬೇಕು
ಙ ಎಲ್ಲೆಂದೆರಲ್ಲೆ ಟೆಟ್ರಾಪ್ಯಾಕ್ , ಬಾಟಲಿಗಳು ಬಿದ್ದಿದ್ದರೆ ಅವುಗಳ ಬಾರ್ ಕೋಡ್ ಸ್ಕ್ಯಾನ್ ಮಾಡಿ ಮದ್ಯ ಮಾರಿದ ಅಂಗಡಿಯ ಪರವಾನಗಿ ರದ್ದುಪಡಿಸಬೇಕು
ಙ ಕುಡುಕರ ಪತ್ನಿ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಹಣ (ಸೆಸ್)ಸಂಗ್ರಹಿಸಬೇಕು
ಙ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬೀಳುವವರನ್ನಅಬಕಾರಿ ಇಲಾಖೆ ವಾಹನದಲ್ಲಿ ಸುರಕ್ಷಿತವಾಗಿ ಅವರ ಮನೆಗೆ ತಲುಪಿಸಬೇಕು
ಙ ದುಡಿದ ಹಣ ಮದ್ಯಕ್ಕೆ ಖರ್ಚು ಮಾಡಿದರೆ ಅವರ ಕುಟುಂಬಕ್ಕೆ ಅಗತ್ಯ ದಿನಸಿ, ಇತರೆ ಸಾಮಾಗ್ರಿಗಳನ್ನು ಇಲಾಖೆ ಉಚಿತವಾಗಿ ಪೂರೈಸಬೇಕು
ಙ ಕುಡುಕರ ಆರೋಗ್ಯ ಹಾಳಾದರೆ ಅವರ ಆರೋಗ್ಯ ತಪಾಸಣೆ, ಚಿಕಿತ್ಸಾ ವೆಚ್ಚವನ್ನು ಇಲಾಖೆ ಅಥವಾ ಸರ್ಕಾರವೇ ಭರಿಸಬೇಕು ಎಂದು ಹೇಳಿದೆ.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಲಹಗಳು ಕೆಲವು ಹಾಸ್ಯಾಸ್ಪದವಾಗಿದ್ದರೂ ಕೆಲವೊಂದು ಮದ್ಯಪ್ರಿಯರಿಗೆ ಹಾಗೂ ಅಬಕಾರಿ ಸನ್ನದುದಾರರಿಗೂ ಜವಾಬ್ದಾರಿ ನಿಗದಿಪಡಿ ಸಿದಂತಾಗುತ್ತದೆ. ಆ ಮೂಲಕ ಪರಿಸರದ ಮೇಲೆ ಉಂಟಾಗುವ ಹಾನಿಯನ್ನು ಹಾಗೂ ಸಾರ್ವಜನಿಕ ಸ್ಥಳಗಳು, ಜಲಮೂಲಗಳ ಸಂರಕ್ಷಣೆಗೂ ಸಹಕಾರಿಯಾಗಲಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.