ಎಐಯುಟಿಯುಸಿ ಅಖಿಲ ಭಾರತ ಸಮ್ಮೇಳನ

AIUTUC All India Conference

ಹುಬ್ಬಳ್ಳಿ 03: ಕೇಂದ್ರ ಕಾರ್ಮಿಕ ಸಂಘಟನೆ ಎಐಯುಟಿಯುಸಿ ಯ 22 ನೇ ಅಖಿಲ ಭಾರತ ಸಮ್ಮೇಳನವು ಡಿಸೆಂಬರ್ 15 ರಿಂದ 17ರವರೆಗೆ 2024 ರಂದು ಒರಿಸ್ಸಾದ ಭುವನೇಶ್ವರದಲ್ಲಿ ಜರುಗಲಿದ್ದು ಅದರ ಅಂಗವಾಗಿ, ಇಂದು ನಗರದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಮಧ್ಯೆ ಪ್ರಚಾರ ಮಾಡಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಗಂಗಾಧರ ಬಡಿಗೇರ, ಸಹಸ್ರಾರು ಕಾರ್ಮಿಕರು ದೇಶದ ಬಹುತೇಕ ಎಲ್ಲಾ ರಾಜ್ಯಗಳನ್ನು ಪ್ರತಿನಿಧಿಸಿ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನವು ಪ್ರಸ್ತುತ ನಮ್ಮ ದೇಶದ ವಿಶೇಷವಾಗಿ ಜಗತ್ತಿನ ಸಮಸ್ತ ದುಡಿಯುವ ಜನರ ಅತ್ಯಂತ ಶೋಚನೀಯ ಪರಿಸ್ಥಿತಿಯ ಬಗ್ಗೆ ಕೂಲಂಕಷವಾಗಿ ಚರ್ಚಿಸಲಿದೆ. ಎಲ್ಲಾ ವಿಭಾಗದ ದುಡಿಯುವ ಜನರ ಪ್ರಬಲ, ಐಕ್ಯ ಮತ್ತು ನಿರಂತರ ಚಳುವಳಿಗಳನ್ನು ಬೆಳೆಸುವ ಮೂಲಕ ಶ್ರಮಜೀವಿಗಳ ಮೇಲೆ ಹೆಚ್ಚುತ್ತಿರುವ ಬಂಡವಾಳ ಶಾಹಿ ದಾಳಿಗಳನ್ನು ಎದುರಿಸಲು ನಿರ್ಧಿಷ್ಟ ಸಂಘಟನಾತ್ಮಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಈ ಸಮ್ಮೇಳನವು ರೂಪಿಸಲಿದೆ.ಇಂದು ಕಾರ್ಮಿಕ ವರ್ಗವು ಹಲವಾರು ಸಮಸ್ಯೆಗಳಿಂದ ತುಂಬಿವೆ. ಅವರ ನೈಜ ವೇತನವು ಗಣನೀಯವಾಗಿ ಕುಸಿಯುತ್ತಿದೆ. ಶಿಕ್ಷಕರು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾಗದಲ್ಲಿ ಹೊಸ ಪಿಂಚಣಿ ವ್ಯವಸ್ಥೆ ತಂದಿರುವುದರಿಂದ ಸಾಮಾಜಿಕ ಭದ್ರತೆಗೆ ಅರ್ಥವೇ ಇಲ್ಲದಂತಾಗಿದೆ. ವಿವಿಧ ರೀತಿಯ ಅಸಂಘಟಿತ ವಲಯದ ಕಾರ್ಮಿಕರಲ್ಲಿ ಬಹಳಷ್ಟು ಸಂಕಷ್ಟಗಳು ಹೆಚ್ಚುತ್ತಿವೆ. ಇನ್ನು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ವಲಸೆ ಕಾರ್ಮಿಕರ ಜೀವನದ ದುರಂತ ಅನಿಶ್ಚಿತ ಸ್ಥಿತಿಯು ಬಹಿರಂಗವಾಗಿದೆ. ಆರ್ಥಿಕವಾಗಿ ತಳಮಟ್ಟದಲ್ಲಿರುವ ಜನಸಂಖ್ಯೆಯ 50ಅ ರಷ್ಟು ಜನರು ತಾವೇ ಸೃಷ್ಟಿಸಿದ ರಾಷ್ಟ್ರೀಯ ಸಂಪತ್ತಿನಲ್ಲಿ 5ಅ ಅನ್ನು ಸಹ ಹೊಂದಿಲ್ಲ.  ಆದ್ದರಿಂದ, ತಳಮಟ್ಟದಿಂದ ಪ್ರಾರಂಭವಾಗುವ ವಿವಿಧ ವಿಭಾಗಗಳ ದುಡಿಯುವ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ದೇಶಾದ್ಯಂತ ಪ್ರಬಲ ಐಕ್ಯ ಚಳುವಳಿಗಳನ್ನು ಬೆಳೆಸುವುದು ಈ ಘಳಿಗೆಯ ಅಗತ್ಯವಾಗಿದೆ. ಆಡಳಿತಾರೂಢ ಬಂಡವಾಳಶಾಹಿ ವರ್ಗದ ಹಿತಾಸಕ್ತಿಗಾಗಿ ಸೇವೆ ಸಲ್ಲಿಸುತ್ತಿರುವ ರಾಜಕೀಯ ಪಕ್ಷಗಳು,ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ,ಎಂದರು. 

ಮುಂದುವರೆದು ಮಾತನಾಡಿದ ಅವರು, ಆಳುವ ಬಂಡವಾಳಶಾಹಿ ವರ್ಗ ಮತ್ತು ಅವರ ಅಧೀನ ಸರ್ಕಾರಗಳ ವಿರುದ್ಧ ಸಮಗ್ರ ಹೋರಾಟವನ್ನು ಹರಿಬಿಡುವುದು ದೇಶದ ದುಡಿಯುವ ಜನರಿಗೆ ಎಐಯುಟಿಯುಸಿ ಯ 22 ನೇ ಅಖಿಲ ಭಾರತ ಸಮ್ಮೇಳನದ ಕಳಕಳಿಯ ಮನವಿಯಾಗಿದೆ. ನಮ್ಮ ದೇಶದ ಎಲ್ಲಾ ದುಡಿಯುವ ಜನರು ಮತ್ತು ಅವರ ನ್ಯಾಯಯುತ ಧ್ಯೇಯದೊಂದಿಗೆ ಬೆಂಬಲವಾಗಿ ನಿಂತಿರುವ ಎಲ್ಲರು ಮುಂಬರುವ ಅಖಿಲ ಭಾರತ ಸಮ್ಮೇಳನದ ಯಶಸ್ಸನ್ನು ಖಾತ್ರಿಪಡಿಸಲು ತನು ಮನ ಧನದಿಂದ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಸಹಕಾರವನ್ನು ನೀಡಲು ಮುಂದೆ ಬರಬೇಕೆಂದು, ಮನವಿ ಮಾಡಿದರು. 

ಈ ಸಭೆಯ ಅಧ್ಯಕ್ಷತೆಯನ್ನು ಭುವನಾ ಬಳ್ಳಾರಿ ವಹಿಸಿದ್ದರು.ಸಭೆಯಲ್ಲಿ ಆಶಾ ತಾಲ್ಲೂಕಾಧ್ಯಕ್ಷರಾದ ಹುಬ್ಬಳ್ಳಿಯ ಭಾರತಿ ಶೆಟ್ಟರ್, ಕುಂದಗೋಳದ ಮಂಜುಳಾ ಗಾಡಗೋಳಿ, ಕಲಘಟಗಿಯ ಶೋಭಾ ಹಿರೇಮಠ ವೇದಿಕೆಯ ಮೇಲಿದ್ದರು. ರಾಜೇಶ್ವರಿ ಕೋರಿ, ಶೋಭಾ ಶಾಂತಪ್ಪನವರ,ಮಂಜುಳಾ ಬಡಿಗೇರ,ಲಕ್ಷ್ಮಿ ಸಂಭಾಳಮಠ, ಸಭಾ, ಬಸಮ್ಮ ಬಿದರಕುಂದಿ, ಸವಿತಾ ಮಜ್ಜಗಿ, ಗಾಯತ್ರಿ ಗುಡ್ಡದಕೇರಿ, ಸುವರ್ಣ ಕುಕನೂರ ಮುಂತಾದವರು ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದರು.