ಇಂದಿನಿಂದ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

Demonstration of disaster management in the district from today: Additional District Collector Sidr

ಇಂದಿನಿಂದ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಯ  ಅಣುಕು ಪ್ರದರ್ಶನ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ 

ಕೊಪ್ಪಳ 21: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌.ಡಿ.ಆರ್‌.ಎಫ್) ಬೆಟಾಲಿಯನ್ 10ನೇ ತಂಡದಿಂದ ವಿಪತ್ತು ನಿರ್ವಾಹಣೆಯ ಅಣುಕು ಪ್ರದರ್ಶನ ಕಾರ್ಯಕ್ರಮವು ಜನವರಿ 22 ರಿಂದ ಫೆಬ್ರವರಿ 6 ರವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.   

ಅವರು ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ 2024-25ನೇ ಸಾಲಿನ ಸಂಭವನೀಯ ಅತೀವೃಷ್ಟಿ, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಅಣುಕು ಪ್ರದರ್ಶನ (ಫೆಮೆಕ್ಸ್‌) ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಕೊಪ್ಪಳ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲಾಡಳಿತ ಹಾಗೂ ಎನ್‌.ಡಿ.ಆರ್‌.ಎಫ್ ತಂಡದ ಸಂಯುಕ್ತಾಶ್ರಯದಲ್ಲಿ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 22 ರಿಂದ ಫೆಬ್ರವರಿ 6 ರವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಎನ್‌.ಡಿ.ಆರ್‌.ಎಫ್‌. ತಂಡದವರು ಅಣುಕು ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು. 

2024-25ನೇ ಸಾಲಿನ ಸಂಭವನೀಯ ಅತೀವೃಷ್ಟಿ, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಗುರಿತಿಸಿ, ಅಂತಹ ಪ್ರದೇಶಗಳಲ್ಲಿ ಎನ್‌.ಡಿ.ಆರ್‌.ಎಫ್ ಬೆಟಾಲಿಯನ್ 10ನೇ ತಂಡದಿಂದ ಅಣುಕು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಮಾತನಾಡಿ, ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಪ್ರಕೃತಿ ವಿಕೋಪದಿಂದ ಆಗುವ ಅನಾಹುತಗಳು, ಕಟ್ಟಡ ಕುಸಿತ, ರಾಸಾಯನಿಕ ಪದಾರ್ಥಗಳಿಂದ ಆಗುವ ಅನಾಹುತಗಳು ಮತ್ತು ಇನ್ನೀತರ ಅನಾಹುತಗಳಿಂದ ಪಾರಾಗಲು ಹಾಗೂ ಭೂಕಂಪ ಬಂದಾಗ ಹೇಗೆ ರಕ್ಷಣೆ ಮಾಡಬಹುದು ಎಂಬುವುದರ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಎನ್‌.ಡಿ.ಆರ್‌.ಎಫ್ ಬೆಟಾಲಿಯನ್ 10ನೇ ತಂಡವು ವಿಶೇಷ ಜಾಗೃತಿ ಮೂಡಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.   

ರಾಷ್ಟ್ರೀಯ ವಿಪತ್ತು ನಿರ್ವಾಹಣಾ ಪಡೆ ಬೆಟಾಲಿಯನ್ 10ನೇ ತಂಡದ ಇನ್‌ಸ್ಪೆಕ್ಟರ್ ಅಜಯ್ ಕುಮಾರ ಅವರು ಮಾತನಾಡಿ, ಅಣುಕು ಪ್ರದರ್ಶನ ಮೂಲಕ ಪ್ರಕೃತಿ ವಿಕೋಪ, ಮಾನವ ನಿರ್ಮಿತ ವಿಕೋಪ, ಅನಿಲ ಸೋರಿಕೆ ತಡೆಗಟ್ಟುವಿಕೆ, ಸುನಾಮಿ, ಭೂಕಂಪ, ಅಗ್ನಿ ಅವಘಡ ಹಾಗೂ ಸಿಡಿಲು ಬಡಿತದಿಂದ ರಕ್ಷಣೆ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ಯಾವರೀತಿ ಮುಂಜಾಗೃತೆ ಕ್ರಮ ಕೈಗೊಳ್ಳಬೇಕು ಎಂಬುವುದರ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಇದರ ಜೊತೆಗೆ ರಕ್ತಶ್ರಾವ ತಡೆಗಟ್ಟುವ ಬಗ್ಗೆ, ಹೃದಯಘಾತ ಸಂದರ್ಭದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮ, ಗಂಟಲಿನಲ್ಲಿ ಸಿಕ್ಕಿಕೊಂಡ ವಸ್ತುಗಳ ಹೊರ ತಗೆಯುವುಕೆ (ಎಫ್‌.ಪಿ.ಎ.ಓ), ಹಾವು ಮತ್ತು ಇತರೆ ಪ್ರಾಣಿ ಕಡಿತದಿಂದ ರಕ್ಷಣೆ ಮಾಡುಕೊಳ್ಳುವ ಬಗ್ಗೆಯೂ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.    

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಎನ್‌.ಡಿ.ಆರ್‌.ಎಫ್ ತಂಡದ ಎ.ಎಸ್‌.ಐ ಸೋಮಧೀರ್ ಕುಮಾರ, ಹೆಡ್ ಕಾನ್ಸ್‌ಸ್ಟೇಬಲ್ ಗಂಗಾಧರ್ ಚಕ್ಕಡಿ, ಕಾನ್ಸ್‌ಸ್ಟೇಬಲ್ ವಜ್ರಜೇತನ ಜಿ.ಆರ್‌. ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.