ಎಆಯ್ ಆಧಾರಿತ: ಪ್ರಥಮವಾಗಿ ಪಲ್ಮನರಿ ಮೆಕ್ಯಾನಿಕಲ್ ಥ್ರಂಬೋಕ್ಟಮಿ ಚಿಕಿತ್ಸೆ ಯಶಸ್ವಿ

AI-based: First successful pulmonary mechanical thrombectomy treatment

ಲೋಕದರ್ಶನ ವರದಿ 

ಎಆಯ್ ಆಧಾರಿತ: ಪ್ರಥಮವಾಗಿ ಪಲ್ಮನರಿ ಮೆಕ್ಯಾನಿಕಲ್ ಥ್ರಂಬೋಕ್ಟಮಿ ಚಿಕಿತ್ಸೆ ಯಶಸ್ವಿ 


ಬೆಳಗಾವಿ 02: ಕೆಮ್ಮು ಮತ್ತು ಕಡಿಮೆ ರಕ್ತದೊತ್ತಡದೊಂದಿಗೆ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಪೆನುಂಬ್ರಾ ಡಿವೈಸ್ ಮೂಲಕ ಪಲ್ಮನರಿ ಮೆಕ್ಯಾನಿಕಲ್ ಥ್ರೊಂಬೋಕ್ಟಮಿ ಚಿಕಿತ್ಸಾ ಪ್ರಕ್ರಿಯೆ ನಡೆಸಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಥಮಬಾರಿಗೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಹೃದಯ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ. 

ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ 31 ವರ್ಷದ ವ್ಯಕ್ತಿಯ ಕಾಲಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿದ್ದ (ಡೀಪ್ ವೇನ್ ಥ್ರಂಬೋಸಿಸ್) ರಕ್ತವು ಶ್ವಾಸಕೋಶಕ್ಕೆ (ಮಾಸಿವ್ ಪಲ್ಮನರಿ ಎಂಬಾಲಿಸಮ್) ಸಂಚರಿಸಿದ ಕಾರಣ ಕಡಿಮೆ ರಕ್ತದೊತ್ತಡದೊಂದಿಗೆ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಆಸ್ಪತ್ರೆಗೆ ಆಗಮಿಸಿದ ಕೂಡಲೇ ಅತ್ಯಂತ ತುರ್ತಾಗಿ ಪೆನಂಬ್ರಾ ಡಿವೈಸ್ ಮೂಲಕ ಪಲ್ಮನರಿ ಮೆಕ್ಯಾನಿಕಲ್ ಥ್ರಂಬೋಕ್ಟಮಿ ಚಿಕಿತ್ಸಾ ಪ್ರಕ್ರಿಯೆಯನ್ನು ಹೃದಯ ರೋಗ ತಜ್ಞವೈದ್ಯರಾದ ಡಾ. ಸಮೀರ್ ಅಂಬರ ಹಾಗೂ ಡಾ. ಸಂಜಯ್ ಪೋರವಾಲ್ ಅವರು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಅತ್ಯಂತ ಕ್ಲಿಷ್ಕರವಾದ ಈ ಚಿಕಿತ್ಸಾ ಪ್ರಕ್ರಿಯೆಗೆ ಹಿರಿಯ ತಜ್ಞವೈದ್ಯರಾದ ಡಾ. ಎಸ್ ವಿ ಪಟ್ಟೇದ, ಡಾ. ವಿಜಯ್ ಮೆಟಗುಡಮಠ, ಡಾ. ಪ್ರಸಾದ್‌.ಎಂ.ಆರ್ ಹಾಗೂ ಡಾ. ವಿಶ್ವನಾಥ್ ಹೆಸರೂರ ಅವರು ಸಹಕರಿಸಿದರು. ಚಿಕಿತ್ಸಾ ಪ್ರಕ್ರಿಯೆ ಎರಡು ದಿನಗಳ ನಂತರ ರೋಗಿಯು ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು.  

ಪಲ್ಮನರಿ ಎಂಬಾಲಿಸಮ್ ಎನ್ನುವುದು ಗಂಭೀರ ಪರಿಸ್ಥಿತಿಯಾಗಿದ್ದು, ರಕ್ತ ಹೆಪ್ಪುಗಟ್ಟುವಿಕೆಯಿಂದ ಶ್ವಾಸಕೋಶಕ್ಕೆ ರಕ್ತ ಸಂಚಾರದಲ್ಲಿ ತೊಂದರೆಯುಂಟಾಗುತ್ತದೆ. ಅಫಧಮನಿಗಳಲ್ಲಿನ ರಕ್ತಹೆಪ್ಪುಗಟ್ಟುವಿಕೆಯನ್ನು ಶೀಘ್ರವೇ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡದಿದ್ದರೆ, ಸಾವು ಸಂಭವಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಕಾಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಶ್ವಾಸಕೋಶಕ್ಕೆ ಸಂಚರಿಸುವ ಸಾಧ್ಯತೆ ಸಾಮಾನ್ಯ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಲ್ಲಿ, ಯಾವುದಾದರೂ ಶಸ್ತ್ರಚಿಕಿತ್ಸೆ ನೆರವೇರಿಸಿದಾಗ, ದೀರ್ಘಕಾಲದಿಂದ ಹಾಸಿಗೆಯಲ್ಲಿರುವ ರೋಗಿಗಳು, ನಿರಂತರ ಸ್ಟೀರಾಯ್ಡ್‌, ತಂಬಾಕು ಸೇವನೆಯು ಡೀಪ್ ವೇನ್ ಥ್ರಂಬೋಸಿಸಗೆ ಕಾರಣವಾಗುತ್ತದೆ.  ಸಾಮಾನ್ಯವಾಗಿ ರೋಗಿಗಳು ಕಾಲು ನೋವು ಮತ್ತು ಉಸಿರಾಟದ ತೊಂದರೆಯೊಂದಿಗೆ ಕಾಲಿನಲ್ಲಿ ಭಾವು ಕಂಡು ಬರುತ್ತದೆ.  

ಅತ್ಯಾಧುನಿಕ ತಂತ್ರಜ್ಞಾನವಾದ ಪೆನುಂಬ್ರಾ ಕೃತಕ ಬುದ್ದಿಮತ್ತೆ ಚಾಲಿತ ವ್ಯವಸ್ಥೆಯಾಗಿದ್ದು, ಎಂಡೋವಾಸ್ಕುಲರ್ ಕಾರ್ಯವಿಧಾನಗಳಲ್ಲಿ ಹೆಪ್ಪುಗಟ್ಟುವಿಕೆಯನ್ನು ತೆಗೆಯಲು ಸಹಕರಿಸುತ್ತದೆ. ಯಶಸ್ವಿ ಚಿಕಿತ್ಸಾ ಪ್ರಕ್ರಿಯೆ ನಡೆಸಿದ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರಾ​‍್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.