ಬೆಂಗಳೂರು, ಮಾ.13, ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ, ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ವಿಧಿವಶರಾಗಿದ್ದಾರೆ.56 ವರ್ಷದ ಚರಣ್ ರೆಡ್ಡಿ ಅವರು ಮಾರಣಾಂತಿಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅವರನ್ನು ವಸಂತ ನಗರದ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಸಂಜಯ ನಗರದ ಮನೆಗೆ ಅವರ ಪಾರ್ಥಿವ ಶರೀರ ತಂದು ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದು ಬಂದಿದೆ.1993ರ ಬ್ಯಾಚ್ ಅಧಿಕಾರಿಯಾಗಿದ್ದ ಚರಣ್ ರೆಡ್ಡಿ ಅವರು ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತ ಎಸ್ಐಟಿ ಮಖ್ಯಸ್ಥರಾಗಿಯು ಸೇವೆ ಸಲ್ಲಿಸಿದ ಅವರು ಐದು ವರ್ಷ ಸಿಬಿಐನಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.ಪ್ರಸ್ತುತ ಅವರು ಸಿಐಡಿ ಎಡಿಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.