ಕಾರವಾರ: ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆಂಬ ಸುಳಿವಿನ ಮೇರೆಗೆ ಎಸಿಬಿ ಅಧಿಕಾರಿಗಳು ಚಂದ್ರಕಾಂತ ಅವರ ಮನೆ ಸೇರಿದಂತೆ ಅವರ ಸಂಬಂಧಿಕರ ಮನೆಗಳ ಮೇಲೆ ಸಹ ದಾಳಿ ಮಾಡಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಯಲ್ಲಾಪುರ ಕಿರವತ್ತಿಯಲ್ಲಿ ಆರ್.ಎಫ್.ಓ.ಆಗಿರುವ ಚಂದ್ರಕಾಂತ ಅವರ ಕ್ವಾಟರ್ಸ, ಅವಸರ್ಾದಲ್ಲಿರುವ ಅವರ ಮೂಲ ಮನೆ ಹಾಗೂ ಕಾರವಾರದ ನಂದನಗದ್ದಾದಲ್ಲಿರುವ ಅವರ ಬಾಡಿಗೆಯ ಮನೆಯ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಮನೆಯಲ್ಲಿ ದಾಖಲೆ ಪತ್ರಗಳನ್ನು ಜಾಲಾಡಿದ್ದಾರೆ. ಮಾಜಾಳಿಯಲ್ಲಿರುವ ಮನೆಯ ಮೇಲೆ ಸಹ ದಾಳಿ ಮಾಡಲಾಗಿದೆ. ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಅವರಿಗೆ ಲಿಂಕ್ ಇರುವ ಐದು ಮನೆಗಳ ಮೇಲೆ ಈ ದಾಳಿ ನಡೆದಿದೆ. ದಾಳಿಯಲ್ಲಿ ಏನೇನು ವಶವಾಗಿದೆ ಎಂಬುದನ್ನು ಎಸಿಬಿ ಅಧಿಕಾರಿಗಳು ಮಾಧ್ಯಮಗಳಿಗೆ ವಿವರಿಸಿಲ್ಲ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದಷ್ಟೇ ಹೇಳಿದ್ದಾರೆ.
ಚಂದ್ರಕಾಂತ ನಾಯ್ಕ ಈ ಹಿಂದೆ ನಡೆದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಸಹ ಇದ್ದರು. ಈ ಸಂಬಂಧ ಅವರ ಬಂಧನವೂ ಆಗಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಜನ ಮಾತಾಡಿಕೊಳ್ಳುತ್ತಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆಂಬ ದೂರು ಅವರ ಮೇಲಿದೆ ಎಂದು ಎಸಿಬಿ ಅಧಿಕಾರಿಗಳ ವಿವರಣೆ. ಎಸಿಬಿ ದಾಳಿಯಲ್ಲಿ ಮಂಗಳೂರಿನ ಎಸಿಬಿ ಡಿವೈಎಸ್ಪಿ ಸುಧೀರ ಹೆಗಡೆ, ಕಾರವಾರ ಜಿಲ್ಲೆಯ ಡಿವೈಎಸ್ಪಿ ಗಿರೀಶ್ , ಇನ್ಸಪೆಕ್ಟರ್ ಮುಲ್ಲಾ ಸೇರಿದಂತೆ ಮತ್ತಿತರ ಅಧಿಕಾರಿಗಳು , ಎಸಿಬಿ ಸಿಬ್ಬಂದಿ ಭಾಗವಹಿಸಿದ್ದಾರೆ.