ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಎಬಿವಿಪಿ ಪ್ರತಿಭಟನೆ

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಎಬಿವಿಪಿ ಪ್ರತಿಭಟನೆ ABVP protests against recruitment of lecturers in first-grade colleges

ಬಳ್ಳಾರಿ 29: 2025ಹಿ26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ  ನೇಮಕಾತಿ ಸಂಬಂಧಿಸಿದಂತೆ  ಕ್ರಮ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ.  

ಕರ್ನಾಟಕ ರಾಜ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 432 ಪದವಿ ಕಾಲೇಜುಗಳಲ್ಲಿ 6,000 ಖಾಯಂ ಉಪನ್ಯಾಸಕರಲ್ಲಿ 3000 ಕ್ಕಿಂತ ಹೆಚ್ಚು ಉಪನ್ಯಾಸಕರು ಈಗಾಗಲೇ ನಿವೃತ್ತಿ ಪಡೆದಿದ್ದು, ಇನ್ನು ಕೇವಲ 3000 ಖಾಯಂ ಉಪನ್ಯಾಸಕರೊಂದಿಗೆ 12,000 ಅತಿಥಿ ಉಪನ್ಯಾಸಕರ ಸೇವಾ ನೆರವಿನಿಂದ ಪದವಿ ತರಗತಿಗಳು ಜರುಗುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು ಮುಂದುವರೆದು ಗುಣಮಟ್ಟದ ಶಿಕ್ಷಣ ನೀಡುವಿಕೆಯ ಖಾತರಿಪಡಿಸಿಕೊಳ್ಳುವುದು ಸರಕಾರದ ಕರ್ತವ್ಯ. ಆದರೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತಂತಿರುವ ಸರ್ಕಾರಗಳು ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಯಂ ಉಪನ್ಯಾಸಕರ/ಅರ್ಹ ಉಪನ್ಯಾಸಕರ ನೇಮಕಾತಿಯಲ್ಲಿ ದೃಢವಾದ ನಿಲುವು ತೆಗೆದುಕೊಳ್ಳದಿರುವುದು ಕಳವಳಕಾರಿಯಾದ ಸಂಗತಿ. 

ಅಭಾವಿಪ ನಗರ ಕಾರ್ಯದರ್ಶಿಗಳಾದ ಆಂಜಿನೇಯ ಚಿಗರಿ ರವರು ಮಾತನಾಡಿ 2025-26 ನೇ ಸಾಲಿನಲ್ಲಿ ಖಾಲಿ ಇರುವ 12,000 ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು 55,000 ಅರ್ಜಿಗಳು ಸಲ್ಲಿಕೆ ಆಗಿರುತ್ತವೆ. ಈಗಾಗಲೇ ನಮ್ಮ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿಗಳು ಪ್ರಾರಂಭವಾಗಿ 2 ತಿಂಗಳು ಕಳೆದರೂ ಸಹಿತ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯ ತರಗತಿಗಳು ನಡೆಯುತ್ತಿಲ್ಲ, ರಾಜ್ಯದ ಪದವಿ  ಕಾಲೇಜುಗಳಿಗೆ ಖಾಯಂ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಷ್ಟು ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲದಿದ್ದರೂ ಕನಿಷ್ಠಪಕ್ಷ  ಅತಿಥಿ ಉಪನ್ಯಾಸಕರ ನೇಮಕಾತಿಗೆ ತತಕ್ಷಣ ಕ್ರಮ ವಹಿಸಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.  

ಇದೇ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಡ-ಮಾಧ್ಯಮ ವರ್ಗದ ಅಥವಾ ಕೂಲಿ ಕಾರ್ಮಿಕರ ಮಕ್ಕಳು, ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸುಧಾರಣೆಗೆ ಸರಕಾರಿ ಪದವಿ ಕ್ಯಾಂಪಸ್ ಗಳಲ್ಲಿ ಸಮರ​‍್ಕ ಗುಣಮಟ್ಟದ ಶಿಕ್ಷಣ ನೀಡುವುದು ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಗಳ ಜವಾಬ್ದಾರಿ ಆಗಿರುತ್ತದೆ.  

ಒಟ್ಟಾರೆಯಾಗಿ ಗಮನಿಸುವುದಾದರೆ, ರಾಜ್ಯದ ಪದವಿ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರ ನೇಮಕಾತಿವಿಲ್ಲದೆ, ಕಾಯಂ ಉಪನ್ಯಾಸಕರ ನೇಮಕಾತಿವಿಲ್ಲದೆ, ಕನಿಷ್ಠಪಕ್ಷ ಅರ್ಹ ಅತಿಥಿ ಉಪನ್ಯಾಸಕರು ಇಲ್ಲದೆ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯೇ ಬುಡ ಮೇಲಾಗಿರುವ ಸಂದರ್ಭದಲ್ಲಿ , ವಿಶ್ವವಿದ್ಯಾಲಯಗಳಿಂದ ಹೊರ ಬರುತ್ತಿರುವ ಪದವೀಧರರ ಭವಿಷ್ಯ ಅತಂತ್ರವಾಗಿದೆ ಹಾಗೂ ಇನ್ನು ಕೆಲವೇ ವರ್ಷಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸರ್ಕಾರ ಪಣ ತೊಟ್ಟಂತಿರುವುದು ಈ ನಾಡಿನ ಶೈಕ್ಷಣಿಕ ವ್ಯವಸ್ಥೆಗೆ ಒದಗಿದ ದುರ್ದೈವ ಪರಿಸ್ಥಿತಿ. ಆದ್ದರಿಂದ ಪದವಿ ಶಿಕ್ಷಣವನ್ನು ಬಲಪಡಿಸಿ, ಶೈಕ್ಷಣಿಕ ಕ್ಷೇತ್ರವನ್ನು ಆದ್ಯತಾ ವಲಯವೆಂದು ಪರಿಗಣಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ರಾಜ್ಯದ ವಿದ್ಯಾರ್ಥಿಗಳ ಹಿತ ಕಾಯಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಗ್ರಹಿಸುತ್ತಾ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. 

ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ನಾಗರಾಜ್ ಬಟಗೇರ, ಸಾಗರ್, ಮಾರುತಿ, ವಿನೋದ್, ರಘು, ಪೂಜಾ, ವೀಣಾ, ವರ್ಷ, ಅಂಜಿನೇಯ ಹಾಗೂ ಇತರೆ ಅ.ಭಾ.ವಿ.ಪರಿಷತ್ ಕಾರ್ಯಕರ್ತರು ಉಪಸ್ಥಿತರಿದ್ದರು.