ತಾಳಿಕೋಟಿ, 22; ಒಂದು ಕುಟುಂಬದ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಅತಿ ಪ್ರಮುಖವಾಗಿದೆ, ಅವಳು ಕುಟುಂಬದ ಆಧಾರ ಸ್ತಂಭವಾಗಿದ್ದಾಳೆ ಎಂದು ಸಾಹಿತಿ, ಶಿಕ್ಷಕಿ ಶಿವಲೀಲಾ ಮಹಾಂತೇಶ ಮುರಾಳ ಹೇಳಿದರು.
ಶುಕ್ರವಾರ ಪಟ್ಟಣದ ಶ್ರೀ ವಿಠಲ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮುದ್ದೇಬಿಹಾಳ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು. ಇವತ್ತು ನಮ್ಮ ಮಕ್ಕಳು ಅತಿಯಾದ ಮೊಬೈಲ್ ಗೀಳಿನಿಂದಾಗಿ ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲ ಆಗುತ್ತಿದ್ದಾರೆ ಅವರನ್ನು ರಕ್ಷಿಸುವ ಕಾರ್ಯವಾಗಬೇಕು ಇದರಲ್ಲಿ ಹೆತ್ತವರ ಪಾತ್ರ ಹೆಚ್ಚಾಗಿದೆ, ಅವರು ತಮ್ಮ ಕರ್ತವ್ಯವನ್ನು ಮರೆಯಬಾರದು. ನಮ್ಮ ಪರಂಪರೆ ಸಂಸ್ಕೃತಿ ಇದು ಮರೆಯಾಗುತ್ತಿದೆ ಇದನ್ನು ಉಳಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ, ಶ್ರೀ ಕ್ಷೇತ್ರ ಧರ್ಮಸ್ಥಳದವರ ಈ ಕಾರ್ಯ ಶ್ಲಾಘನೀಯ ವಾದದ್ದಾಗಿದೆ ಎಂದರು.
ಯೋಜನಾಧಿಕಾರಿ ನಾಗೇಶ್ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ಸಂಸ್ಥಾಪಕರಾದ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಇವರ ಕೃಪಾ ಆಶೀರ್ವಾದದೊಂದಿಗೆ ಈ ಸಂಸ್ಥೆಯು ತಾಲೂಕಿನಲ್ಲಿ ಮಹಿಳಾ ಸಬಲೀಕರಣ, ಸಮಾಜದಲ್ಲಿರುವ ಬಡ ದುರ್ಬಲರನ್ನು ಮುಖ್ಯ ವಾಹಿನಿಗೆ ತರುವುದು, ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನ್ ಭಾಷಾ ಜಮಾದಾರ ಅಧ್ಯಕ್ಷತೆ ವಹಿಸಿದ್ದರು. ವಿಠ್ಠಲ ಮಂದಿರ ಟ್ರಸ್ಟ್ ಅಧ್ಯಕ್ಷ ಸಂಭಾಜಿ ವಾಡ್ಕರ್, ಪುರಸಭೆ ಉಪಾಧ್ಯಕ್ಷ ಗೌರಮ್ಮ ಕುಂಬಾರ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ರಾಜು ಸೊಂಡೂರ, ಮುದುಕಪ್ಪ ಬಡಿಗೇರ, ಜನಜಾಗ್ರತಿ ವೇದಿಕೆ ಸದಸ್ಯೆ ಸುವರ್ಣ ಬಿರಾದಾರ, ಒಕ್ಕೂಟದ ಅಧ್ಯಕ್ಷೆ ಶಾರದಾ ಹಿರೇಮಠ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮದ ನಂತರ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಬಣ್ಣ ಎಸ್ ಕೆ ಹಾಗೂ ನೇತ್ರಾವತಿ ನಿರೂಪಿಸಿ ವಂದಿಸಿದರು.