ರಾಣೇಬೆನ್ನೂರು: ಇಂದಿನ ಆಧುನಿಕ ಭಾರತದ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆದು ಸರ್ವ ಸ್ವತಂತ್ರಳಾಗಿ ಬದುಕು ಸಾಗಿಸುತ್ತಿರುವುದು ಈ ದೇಶದ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಪಿಕೆಕೆ ಇನಿಶಿಯೇಟಿವ್ ಅಧ್ಯಕ್ಷ, ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು, ಇಲ್ಲಿನ ಆಂಗ್ಲೋರ್ದು ಹೈಸ್ಕೂಲ್ ಮೈದಾನದಲ್ಲಿ, ಪಿಕೆಕೆ, ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಸಮಾನತೆ ಸಾಗಬೇಕು ಅದಕ್ಕೆ ಮಹಿಳೆಯರು ಎಲ್ಲ ರೀತಿಯಿಂದಲೂ ಪ್ರಯತ್ನಿಸಿದಾಗ ಮಾತ್ರ ಸಾಧ್ಯ. ತಮ್ಮ ಕ್ಷೇತ್ರದಲ್ಲಿ ಆರಂಭಿಕವಾಗಿ ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡಿರುವುದಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಓಂ ಸಮೋಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ರುಕ್ಮಿಣಿ ಸಾವಕಾರ ಅವರು, ಸಂಸ್ಕೃತಿ ಮತ್ತು ಸಂಸ್ಕಾರ ನಮ್ಮ ಅವಿಭಾಜ್ಯ ಅಂಗವಾಗಬೇಕು. ಅವಿಭಕ್ತ ಕುಟುಂಬ ಪರಂಪರೆ ಭಾರತೀಯ ಸಂಸ್ಕೃತಿ. ಇಂದು ಶಿಕ್ಷಣವಂತರಾಗಿರುವ ನಾವುಗಳು, ತಂದೆ ತಾಯಿ ಬಂಧು-ಬಳಗ ಯಾರೊ ಇಲ್ಲದೇ ಪರದೇಶಿಯಂತಾಗಿದ್ದೇವೆ. ಎಂದು ವಿಷಾದಿಸಿದರು. ತಂದೆ ತಾಯಿ ಸಾಕಬೇಕಾದ ಹೊಣೆ ನಮ್ಮದು. ವೃದ್ಧಾಶ್ರಮಕ್ಕೆ ಸೇರಿಸುವ ಸಂಸ್ಕೃತಿ ನಮ್ಮದಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಚಿಂತನೆ ನಡೆಸಿ, ಋಣ ತೀರಿಸಿ ಸಂಸ್ಕಾರವಂತರಾಗಿ ಬಾಳಬೇಕಾದ ಇಂದಿನ ಅಗತ್ಯವಿದೆ ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು, ಬೆಂಗಳೂರಿನ ಭಾಷಣಕಾರ ಎ. ಎಸ್. ಸಾಗರ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ,ಪಿಕೆಕೆ ಇನಿಶಿಯೇಟಿವ್ ಅಧ್ಯಕ್ಷ ಪೂರ್ಣಿಮಾ ಪ್ರಕಾಶ ಕೋಳಿವಾಡ ಅವರು ಮಾತನಾಡಿ, ಇಂದಿನ ಮಹಿಳೆ ತನ್ನ ದೈನಂದಿನ ಬದುಕಿನ ಜೊತೆಗೆ, ಯಾವುದೇ ಮಡಿವಂತಿಕೆ ಇಟ್ಟು ಕೊಳ್ಳದೆ ತನ್ನ ಅಭಿವೃದ್ಧಿಯ ಜೊತೆಗೆ ಸಮಾಜದ ಕಟ್ಟಕಡೆಯ ಮನುಷ್ಯನ, ಸಮಾನತೆಗಾಗಿ ಪ್ರಯತ್ನಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆ, ತನ್ನ ಪಾಲಿನ ಸೇವೆ ಸಲ್ಲಿಸುತ್ತಲಿದೆ ಎಂದರು. ಕಾರ್ಯಕ್ರಮದಲ್ಲಿ, ನಗರಸಭಾಧ್ಯಕ್ಷ ಚಂಪಕ ಬಿಸಲಹಳ್ಳಿ, ಬೆಂಗಳೂರು ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥೆ ಡಾ, ಗೀತಾ, ಸರ್ಕಾರಿ ಮಹಿಳಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ, ರಾಜೇಶ್ವರಿ ಕದರಮಂಡಲಗಿ, ಸಹಾಯಕ ಕೃಷಿ ನಿರ್ದೇಶಕಿ ಜಿ.ಶಾಂತಮಣಿ, ಸೇರಿದಂತೆ ಮತ್ತಿತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ನೂರಾರು ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಸ್ಪರ್ಧಾತ್ಮಕ ಚದ್ಮ ವೇಶ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಸಾಂಸ್ಕೃತಿಕ ಪ್ರತಿಭೆ ಮೆರೆದು ಸಾರ್ವಜನಿಕರ ಗಮನ ಸೆಳೆದರು.
ಅಂಗನವಾಡಿ ಶಿಕ್ಷಕೀಯರು ಪ್ರಾರ್ಥಿಸಿದರು. ರತ್ನಾ ಮೋಹನ ಪುನೀತ್, ಸ್ವಾಗತಿಸಿದರು. ಇರ್ಫಾನ್ ದಿಡಗೂರು ಪ್ರಾಸ್ತಾನಿಕವಾಗಿ ಮಾತನಾಡಿದರು. ನಿರ್ಮಲಾ ಲಮಾಣಿ ನಿರೂಪಿಸಿದರು. ಮುಂಜಾನೆಯಿಂದ ಸಂಜೆವರೆಗೂ ನಡೆದ ವಿವಿಧ ವೈದ್ಯಕೀಯ ತಪಾಸಣೆಯಲ್ಲಿ 500ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡು ತಪಾಸಣೆಗೂಳಪಟ್ಟರು.