ಬೆಳಗಾವಿಯಲ್ಲಿ ಸೆ.8 ರಿಂದ ಎರಡು ದಿನ ಗ್ರಾಮೀಣಾಭಿವೃದ್ಧಿ ಸಭೆ: ಕೆ.ಎಸ್ ಈಶ್ವರಪ್ಪ

ಬೆಂಗಳೂರು, ಆ 29        ಆಳ ಅಗಲ, ಅಂತ್ಯವಿಲ್ಲದ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆಯಾಗಿದೆ. ಹಾಗಾಗಿ, ಪೂರ್ಣ ಪ್ರಮಾಣದ ಶ್ರಮ ಹಾಕಿ ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂದು ವಿಕಾಸ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. 

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಪತ್ರಿಕೆಗಳ ಮೂಲಕ ಬರುವ ಸುದ್ದಿಗಳು, ಸಲಹೆ ಸೂಚನೆಗಳನ್ನು ಇಲಾಖೆಯನ್ನು ಸಮರ್ಪಕವಾಗಿ ನಿಭಾಯಿಸುವ ಕೆಲಸ ಮಾಡುತ್ತೇನೆ. ಹಿಂದೆ ನೀರಾವರಿ ಸಚಿವರಾಗಿದ್ದಾಗ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಿಸಿದ ಸುದ್ದಿಯನ್ನು ಪರಿಶೀಲಿಸಿ ಮುಖ್ಯಮಂತ್ರಿ ಅವರ ಅನುಮೋದನೆ ಪಡೆದು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.  

ವಿರೋಧ ಪಕ್ಷದಲ್ಲಿದ್ದಾಗ ಕಪ್ಪು ಬಾವುಟ ಪ್ರದರ್ಶನ ಮಾಡುವುದು ಸುಲಭ. ಆದರೆ, ಆಡಳಿತ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡುವುದು ಕಷ್ಟದ ಕೆಲಸ.  ಗ್ರಾಮೀಣಾಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಸೆ. 8 ರಂದು ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು , ಉಪಾಧ್ಯಕ್ಷರು ಒಳಗೊಂಡಂತೆ ಸ್ಥಾಯಿ ಸಮಿತಿ ಅಧ್ಯಕ್ಷರ ಸಭೆಯನ್ನು ಸೆ. 9 ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಸಲಾಗುವುದು ಎಂದರು.  

  ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳು, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮತ್ತು ನ್ಯೂನತೆಗಳು, ತುರ್ತ ರಸ್ತೆ ಸಂಪರ್ಕಗಳು, ಸಕಾಲದಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೂಲಿ ಪಾವತಿ, ಅಂತರ್ಜಲ ರಕ್ಷಣಾ ಕಾಮಗಾರಿಗಳು, ಕೆರೆಗಳ ಪುನಶ್ಚೇತನದ ,ಶೌಚಾಲಯಗಳ ನಿರ್ಮಾಣ, ನಿರ್ವಹಣೆ ಸ್ವಚ್ಛತೆ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ, ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣದ ಬಗ್ಗೆಯೂ ಚರ್ಚೆ ನಡೆಸುತ್ತೇವೆ ಎಂದು ಮಾಹಿಯಿ ನೀಡಿದರು.  

ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ಸದಸ್ಯರನ್ನು ಸರಿಯಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ. ಅವರ ಚಿಂತನೆಗಳ ಸಲಹೆಯನ್ನು ಪಡೆಯುತ್ತೇವೆ. ಮೊದಲ ಚಿಂತನಾ ಸಭೆ ಬೆಳಗಾವಿಯಲ್ಲಿ ನಡೆಯುತ್ತಿದೆ. ಈ ರೀತಿ ಸಭೆಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡಲಿದ್ದೇವೆ ಎಂದು ಕೆ.ಎಸ್ ಈಶ್ವರಪ್ಪ ಭರವಸೆ ನೀಡಿದ್ದಾರೆ. 

ಬೆಳಗಾವಿ ಭಾಗದಲ್ಲಿ  ನೆರೆ ಸಂತ್ರಸ್ತರ ಪರಿಸ್ಥಿತಿ ನೋಡಿ ಕಣ್ಣಲ್ಲಿ ನೀರು ಬಂತು. ನಾನು ಬರ ಪರಿಸ್ಥಿತಿ ಇದ್ದಾಗಲೂ ಪ್ರವಾಸ ಮಾಡಿದ್ದೆ. ಆ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ ಗಮನಿಸಿದ್ದೆ. ಆದರೆ ಈ ಬಾರಿ ಅಧಿಕಾರಿಗಳು ಸಂತ್ರಸ್ತರೆಲ್ಲಾ ತಮ್ಮ ಅಣ್ಣ-ತಮ್ಮಂದಿರೇನೋ ಎಂಬಂತೆ ಸೇವೆ ಸಲ್ಲಿಸಿದ್ದಾರೆ. 

ಸಂಘ ಸಂಸ್ಥೆಗಳಿಂದ ಹರಿದು ಬಂದ ಮಾನವೀಯ ನೆರವು ತುಂಬಾ ಇದೆ. ಶೆಡ್ ನಿರ್ಮಾಣ ಮಾಡಿಕೊಳ್ಳಲು ನೆರವು ನೀಡುವುದು ತಾತ್ಕಾಲಿಕ. ಆದರೆ, ಐದು ಲಕ್ಷ ರೂ.ನೆರವು ನೀಡುವುದು ಮುಖ್ಯ. ಬಾಗಲಕೋಟೆ ಮತ್ತಿತರರ ಕಡೆಗಳಲ್ಲಿ ಹಿಂದೆ ನೆರೆ ಸಂತ್ರಸ್ತರಿಗೆ ನಿರ್ಮಿಸಿಕೊಡಲಾಗಿದ್ದ ಮನೆಗಳಿಗೆ ಅವರು ಹೊಗಲೇ ಇಲ್ಲ. ಆದರೆ, ಈ ಬಾರಿ ಸಂತ್ರಸ್ತರು ಸರ್ಕಾರ ನಿರ್ಮಿಸಿಕೊಡುವ ಮನೆಗೆ ವಾಸಕ್ಕೆ ಬಂದ ಬಳಿಕವೇ ಪರಿಹಾರದ ಹಣ ವಿತರಿಸಲಾಗುತ್ತದೆ ಎಂದರು.  

ಆದಷ್ಟೂ ಎತ್ತರದ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಮಾಡಲು ಸೂಚಿಸಲಾಗಿದೆ. ದಾಖಲೆಗಳನ್ನೂ ಕಳೆದು ಕೊಂಡಿರುವ ನೈಜ ಸಂತ್ರಸ್ತರನ್ನು ಹುಡುಕಿ ಪರಿಹಾರ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಪುಸ್ತಕ ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹೊಸದಾಗಿ ಪುಸ್ತಕ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದರು.  

ಕರ್ನಾಟಕವನ್ನು ಬಯಲು ಶೌಚಾಲಯ ಮುಕ್ತ ಎಂದು ಘೋಷಿಸಿರುವುದು ನಿಜ. ಇನ್ನೂ ಸುಮಾರು ಎರಡು ಲಕ್ಷ ಕುಟುಂಬಗಳಿಗೆ ಮಾತ್ರ ಶೌಚಾಲಯ ನಿಮರ್ಿಸಿಕೊಡುವುದು ಬಾಕಿ ಇದೆ. ಪೂರ್ಣ ಪ್ರಮಾಣದಲ್ಲಿ ಬಯಲು ಶೌಚಾಲಯ ಮುಕ್ತ ಆಗಿಲ್ಲ. ಆದರೆ, ಅದಕ್ಕೆ ಮೊದಲು ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ ಎಂದರು. 

ಬೆಂಗಳೂರು ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಪಿಓಪಿ ಗಣೇಶಗಳ ನಿಷೇಧಕ್ಕೆ ಕಾನೂನು ಜಾರಿಗೆ ತರಬೇಕು. ಆದರೆ, ಅಷ್ಟರಿಂದಲೇ ಪಿಓಪಿ ಗಣೇಶಗಳನ್ನು ತಡೆಯಲು ಸಾಧ್ಯವಿಲ್ಲ. ಜನ ಜಾಗೃತಿ ಆಗಬೇಕು. ಜನ ಜಾಗೃತಿ ಆಗುತ್ತಿದೆ. ಮೊದಲಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಸಂಘ-ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲೇ ಪರಿಸರ ಸ್ನೇಹಿ ಗಣಪಗಳ ಬಳಕೆಗೆ ಆಸಕ್ತಿ ವಹಿಸಿರುವುದು ಕಂಡು ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.