ರಾಷ್ಟ್ರಪತಿ ಅವರಿಂದ ಅಕ್ಟೋಬರ್ 10ರಿಂದ ಮೂರು ದಿನಗಳ ರಾಜ್ಯ ಭೇಟಿ

ಬೆಂಗಳೂರು, ಅ 5:  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಕ್ಟೋಬರ್ 10ರಿಂದ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.      ರಾಷ್ಟ್ರಪತಿಗಳು ತಮ್ಮ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಮೈಸೂರಿನ ಮಹಾರಾಜ, ದಿವಂಗತ ಜಯಚಾಮರಾಜ ಒಡೆಯರ್ ಅವರ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

 ದಕ್ಷಿಣ ಭಾರತದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾದ ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ರಾಮನಾಥ್ ಕೋವಿಂದ್,  ಮೈಸೂರಿನ ವರುಣ ಗ್ರಾಮದ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

 ಭೇಟಿಯ ಮೂರನೇ ದಿನದಂದು ರಾಷ್ಟ್ರಪತಿ ಅವರು  ಮಾಜಿ ಕೇಂದ್ರ ಸಚಿವ ದಿವಂಗತ ಎಚ್. ಎನ್. ಅನಂತ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರು ನಗರದ ಹೊರವಲಯದಲ್ಲಿರುವ ಜಿಗಣಿಯಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.