ಕಲಬುರಗಿ 03: ಹನ್ನೊಂದು ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕು ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದಿದ್ದು, ಖಾಸಗಿ ಶಾಲಾ ಮುಖ್ಯಸ್ಥ ಹಾಜಿಮಲಂಗ ಗಣಿಯಾರನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಖಂಡಿಸಿ, ಉಗ್ರ ಶಿಕ್ಷೆಗೆ ಆಗ್ರಹಿಸಿ ತಾಲೂಕಿನ ವಿವಿಧ ಸಂಘಟನೆಗಳು ಯಡ್ರಾಮಿ ಬಂದ್ ಮಾಡಿ ಮಂಗಳವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ್ದು, ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಹಾಜಿಮಲಂಗ ಅವರು ಶಾಲಾ ತರಗತಿಗಳು ಮುಗಿದ ಬಳಿಕ ಟ್ಯೂಷನ್ ಕ್ಲಾಸ್ ಮಾಡುವುದಾಗಿ ಕೆಲವು ಮಕ್ಕಳನ್ನು ರಾತ್ರಿ ಶಾಲೆಯಲ್ಲಿ ಉಳಿಸಿಕೊಳ್ಳುತ್ತಿದ್ದರು. ಕ್ಲಾಸ್ ತೆಗೆದುಕೊಂಡು ಬೆಳಿಗ್ಗೆ ಅವರನ್ನು ಮನೆಗೆ ಕಳುಹಿಸುತ್ತಿದ್ದರು. ಮೇ ತಿಂಗಳಲ್ಲಿ 11 ವರ್ಷದ ಬಾಲಕಿಗೆ ರಕ್ತಸ್ರಾವವಾಗಿತ್ತು. ಮಗಳು ದೊಡ್ಡವಳು (ಮುಟ್ಟಿನ) ಆಗಿರಬಹುದೆಂದು ಪೋಷಕರು ಸುಮ್ಮನಿದ್ದು ಎಂದಿನಂತೆ ಶಾಲೆಗೆ ಕಳುಹಿಸಿದ್ದರು. ಅಂದಿನ ರಕ್ತಸ್ರಾವ ಅತ್ಯಾಚಾರದಿಂದ ಆಗಿತ್ತು ಎಂಬುದು ಅವರಿಗೆ ತಡವಾಗಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ ವಿಷಯವನ್ನು ಮನೆಯಲ್ಲಿ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಮಗು ಮನೆಯಲ್ಲಿ ತಿಳಿಸಲು ಹಿಂಜರಿದಿದೆ. ನಂತರ ಪಕ್ಕದ ಮನೆಯವರ ಮುಂದೆ ಮಗು ವಿಷಯ ತಿಳಿಸಿದ್ದು, ಅವರು ಮಗುವಿನ ತಂದೆ, ತಾಯಿಗೆ ವಿಷಯ ತಿಳಿಸಿದ್ದಾರೆ. ನಂತರ ಸಂತ್ರಸ್ತ ಮಗುವಿನ ಪಾಲಕರು ತಮ್ಮ ಸಮುದಾಯದ ಎಲ್ಲ ಹಿರಿಯರೊಂದಿಗೆ ಚರ್ಚಿಸಿ ಸೋಮವಾರ ಸಾಯಂಕಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ವಿಷಯ ತಾಲೂಕಿನಾದ್ಯಂತ ಹರಡಿದ್ದು, ಮಂಗಳವಾರ ಬೆಳಿಗ್ಗೆ ಬಂಜಾರಾ ಸಮುದಾಯ ಸೇರದಂತೆ ಪಟ್ಟಣದ ಎಲ್ಲ ಸಮುದಾಯ ಹಾಗೂ ಎಲ್ಲ ಸಂಘಟನೆಗಳು ಸೇರಿಕೊಂಡು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಪಟ್ಟಣ ಬಿಗುವಿನಿಂದ ಕೂಡಿದ್ದು, ಮುಂಜಾಗ್ರತೆಗಾಗಿ ಬಿಇಓ ವೀರಣ್ಣ ಬೊಮ್ಮನಳ್ಳಿ ಸ್ಥಳೀಯ ಶಾಲೆಗಳಿಗೆ ರಜೆ ನೀಡಿದ್ದಾರೆ.