ಲೋಕದರ್ಶನ ವರದಿ
ಯಶಸ್ವಿಯಾದ ಮಕ್ಕಳ ಸಂತೆ
ಯಶಸ್ವಿಯಾದ ಮಕ್ಕಳ ಸಂತೆ
ಧಾರವಾಡ 27:ರಂಗಾಯಣವು “ನಮ್ಮ ಸಂವಿಧಾನ ನಮ್ಮ ಕಲರವ” ಧ್ಯೇಯವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಇಂದು ಮಕ್ಕಳಿಗೆ ಗ್ರಾಮೀಣ ಬದುಕು ಹಾಗೂ ವ್ಯವಹಾರದ ಜ್ಞಾನವನ್ನು ನೀಡುವುದಕ್ಕಾಗಿ “ಮಕ್ಕಳ ಸಂತೆ”ಯನ್ನು ರಂಗಾಯಣದ ಆವರಣದಲ್ಲಿ ಏರಿ್ಡಸಲಾಗಿತ್ತು.
ಮಕ್ಕಳ ಸಂತೆಯನ್ನು ವೃತ್ತಿ ರಂಗಭೂಮಿ ಕಲಾವಿದೆ ಪ್ರೇಮಾ ತಾಳಿಕೋಟಿ ಅವರು ಉದ್ಘಾಟಿಸಿ, ಮಕ್ಕಳು ಮಾರಾಟ ಮಾಡುವ ಆಹಾರದ ತಿಂಡಿ-ತಿನಿಸುಗಳನ್ನು ಹಾಗೂ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಿದರು.
ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಕೇವಲ ಮೊಬೈಲ್‌ಗಳಿಗೆ ಸೀಮಿತವಾಗಿದ್ದಾರೆ. ಹೊರಗಡೆಯ ಆಟಗಳನ್ನು ನಿಲ್ಲಿಸಿದ್ದಾರೆ. ಮನೆಯ ನಾಲ್ಕು ಗೋಡೆಗಳ ಮಧ್ಯೆ ಮೊಬೈಲ್‌ಗಳಲ್ಲಿಯ ಗೇಮ್‌ಗಳನ್ನು ಒಬ್ಬರೆ ಆಡುತ್ತಾ, ಬೇರೆಯವರೊಂದಿಗೆ ಬೆರೆಯದೇ, ಹೊರಗಿನ ಸುಂದರವಾದ ಪ್ರಪಂಚವನ್ನು ಮರೆತಿದ್ದಾರೆ. ಇಂತಹ ಮಕ್ಕಳಿಗೆ ಹಳ್ಳಿಯ ಸಂತೆಯನ್ನೆ ಇಂದು ರಂಗಾಯಣದ ಆವರಣದಲ್ಲಿ ಸೃಷ್ಠಿಸಿ, ಪ್ರಾಯೋಗಿಕವಾಗಿ ಮಕ್ಕಳಿಗೆ ಗ್ರಾಮೀಣ ಬದುಕು, ಖರೀದಿದಾರೊಂದಿಗೆ ಸಂಭಾಷಣೆ ಮಾಡುವ ಕೌಶಲ್ಯ ಹಾಗೂ ವ್ಯವಹಾರದ ಜ್ಞಾನವನ್ನು ನೀಡುವಲ್ಲಿ ಧಾರವಾಡ ರಂಗಾಯಣ ಯಶಸ್ವಿಯಾಯಿತು.
ಶಿಬಿರದ ಮಕ್ಕಳು ಮನೆಯಲ್ಲಿ ತಯಾರಿಸಿದ ಶೇಂಗಾ ಚಿಕ್ಕೆ, ಉಂಡೆಗಳು, ಚುರುಮುರಿ, ಮಿರ್ಚಿ-ಗಿರಮಿಟ್, ಸಾವಯುವ ಕೃಷಿಯಿಂದ ತಯಾರಿಸಿದ ವಸ್ತುಗಳು, ಚಿತ್ರಕಲೆಯ ಚಿತ್ರಪಟಗಳು, ಗುಡಿ ಕೈಗಾರಿಕೆ ವಸ್ತುಗಳು, ಕರಕುಶಲ ವಸ್ತುಗಳು, ಪುಸ್ತಕಗಳು, ಪೆನ್ನು, ಸಿಹಿತಿನಿಸುಗಳು, ತರಕಾರಿ, ಕಡ್ಲೆಕಾಯಿ, ಇತ್ಯಾದಿಗಳನ್ನು ಮಕ್ಕಳೆ ಮನೆಯಿಂದ ತಂದು ತಾವೇ ಮಾರಾಟ ಮಾಡಿದರು. ಇದರಿಂದ ಮಕ್ಕಳು ವ್ಯಾಪಾರ ಮಾಡುವ ಕಲೆಯನ್ನು ಕಲಿತುಕೊಳ್ಳುವ ಮೂಲಕ ವ್ಯವಹಾರದ ಜ್ಞಾನವನ್ನು ಬೆಳಸಿಕೊಂಡರು.
ಹಿರಿಯ ವಕೀಲರಾದ ರಾಜೇಂದ್ರ ಪಾಟೀಲ, ರಂಗ ನಿರ್ದೇಶಕರಾದ ಪ್ರಭು ಹಂಚಿನಾಳ, ಶಿಬಿರದ ನಿರ್ದೇಶಕರಾದ ಲಕ್ಷ್ಮಣ ಪೀರಗಾರ ರಂಗಾಯಣದ ಸಿಬ್ಬಂದಿಗಳು ಸೇರಿದಂತೆ ಇತರರು. ರಂಗಾಯಣದ ನಾಟಕ ನಿರ್ದೇಶಕರು, ಸಹ ನಿರ್ದೇಶಕರು ಸಂತೆಯಲ್ಲಿ ಕಳ್ಳತನ ಮಾಡುವ, ತೃತೀಯ ಲಿಂಗಿಗಳು ವಸೂಲಿ ಮಾಡುವ ಹಾಗೂ ರಂಗಾಯಣದ ಸಿಬ್ಬಂದಿ ಟ್ಯಾಕ್ಸ್ ಕೇಳುವ ದೃಶ್ಯಗಳನ್ನು ನೈಜವೆಂಬಂತೆ ಮಕ್ಕಳಿಗೆ ನಿಜವಾದ ಸಂತೆಯ ವಾತಾವರಣವನ್ನು ಕಲ್ಪಿಸಿಕೊಡುವ ಮೂಲಕ ರಂಗಾಯಣದ ಮಕ್ಕಳ ಸಂತೆ ಯಶಸ್ವಿಯಾಯಿತು.