ಲೋಕದರ್ಶನ ವರದಿ
ಬೆಟಗೇರಿ 17: ಜನ್ಮ ದಿನದಂದು ಶಾಲೆಗೆ ದೇಣಿಗೆ ನೀಡಿದ ವಿದ್ಯಾರ್ಥಿನಿ... ತಂದೆಯ ಶೈಕ್ಷಣಿಕ ಪ್ರೇಮ.. ಶಾಲಾ ಮಕ್ಕಳಿಗೆ ಮಾದರಿಯಾದ ವಿದ್ಯಾರ್ಥಿನಿ.! ಇದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿ.ವಿ.ದೇ. ಸರ್ಕಾರಿ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಮಹಾಲಕ್ಷ್ಮೀ ಮಲ್ಲಪ್ಪ ಈಟಿ ಪ್ರತಿ ವರ್ಷ ಡಿಸೆಂಬರ 17 ರಂದು ತನ್ನ ಹುಟ್ಟು ಹಬ್ಬದ ದಿನ ತಾನು ಕಲಿಯುತ್ತಿರುವ ಶಾಲೆಗೆ ಅವಶ್ಯಕ ಸಾಮಗ್ರಿಗಳನ್ನು ದೇಣಿಗೆ ನೀಡಿ ಶಾಲಾ ಮಕ್ಕಳಿಗೆ ಮಾದರಿಯಾಗಿದ್ದಾಳೆ.
ಗೋಕಾಕ ತಾಲೂಕಿನ ಮರಡಿಶಿವಾಪುರ ಗ್ರಾಮದ ಕೃಷಿ ಕುಟುಂಬದ ಮಲ್ಲಪ್ಪ-ಮಂಜುಳಾ ರೈತ ದಂಪತಿಗಳು ಮಗಳು ಹುಟ್ಟಿದ ದಿನ ಏನಾದರೂ ಶಾಲೆಗೆ ದೇಣಿಗೆ ನೀಡಲು ಬಯಸಿ ಶಾಲೆಯಲ್ಲಿ ಕೊರತೆಯಿದ್ದ ಉಪಕರಣ, ಮತ್ತೀತರ ಪರಿಕರಗಳನ್ನು ಕೋಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.
ಹಿರಿಯ ಮಗಳಾದ ಶಾಲೆಯ ಈಗ 9 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಮಹಾಲಕ್ಷ್ಮೀ ಈಟಿ ಅವರು ಕಳೆದ ವರ್ಷ 8ನೇ ತರಗತಿಯಲ್ಲಿದ್ದಾಗ ತನ್ನ ಜನ್ಮ ದಿನಾಚಾರಣೆ ಪ್ರಯುಕ್ತ ಹುಟ್ಟುಹಬ್ಬದ ಸವಿನೆನಪಿಗಾಗಿ ಶಾಲೆಗೆ ಸುಮಾರು 3 ಸಾವಿರ ರೂಪಾಯಿ ಮೌಲ್ಯದ ಊಟದ ತಟ್ಟೆಗಳನ್ನು ಶಾಲೆಗೆ ನೀಡಿದ್ದಳು. ಈ ವರ್ಷ 2019ರ ಮಂಗಳವಾರ ಡಿಸೆಂಬರ 17 ರಂದು ಸುಮಾರು 6 ಸಾವಿರ ರೂಪಾಯಿ ಮೌಲ್ಯದ ಕಛೇರಿಯ ಟೇಬಲ್ ನೀಡಿದ್ದಾಳೆ. ಶಾಲೆಗೆ ಸ್ವತ: ಭೇಟಿ ನೀಡಿ ಮುಖ್ಯೋಪಾಧ್ಯಯರ ಸಲಹೆಯಂತೆ ಮಹಾಲಕ್ಷ್ಮೀ ಮಗಳ ಜನ್ಮ ದಿನದ ಪ್ರಯುಕ್ತ ಶಾಲೆಗೆ ಅವಶ್ಯಕ ಉಪಕರಣಗಳನ್ನು ದೇಣಿಗೆ ನೀಡಿ ಶಿಕ್ಷಣಪ್ರೇಮ ಮೆರೆದಿದ್ದಾರೆ.
ಜನ್ಮ ದಿನ ಆಚರಣೆ: ಶಾಲೆಯ ಕುಮಾರಿ ಮಹಾಲಕ್ಷ್ಮಿ ಈಟಿ ವಿದ್ಯಾರ್ಥಿನಿ ಜನ್ಮ ದಿನಾಚರಣೆಯನ್ನು ಶಾಲೆಯಲ್ಲಿ ಮಂಗಳವಾರ ಡಿ.17 ರಂದು ಆಯೋಜಿಸಿ, ಕೇಕ್ ಕತ್ತರಿಸಿ ಶಾಲೆಯ ಮುಖ್ಯೋಪಾಧ್ಯಯ, ಶಿಕ್ಷಕ ವೃಂದ, ಶಾಲಾ ಮಕ್ಕಳು ಶುಭಾಶಯ ಕೋರಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಮಹಾಲಕ್ಷ್ಮಿ ಈಟಿ ಅವಳು ಜನ್ಮ ದಿನದ ಪ್ರಯುಕ್ತ ಶಾಲೆಗೆ ದೇಣಿಗೆ ನೀಡುತ್ತಿರುವ ಕಾರ್ಯ ರಾಜ್ಯದಲ್ಲೆಯೇ ಮಾದರಿಯಾಗಿದೆ ಎಂದು ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಈ ವೇಳೆ ಶಾಲೆಯ ಶಿಕ್ಷಕರಾದ ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ವಿ.ಬಿ.ಬಿರಾದಾರ, ಶುಭಾ.ಬಿ., ರಾಕೇಶ ನಡೊಣಿ,ಪ್ರಕಾಶ ಮುರಕಟ್ನಾಳ, ಬಾಳೇಶ ಕೂಟೂರ, ರೂಪಾ ಖನಗಾವಿ, ಗಣಪತಿ ಭಾಗೋಜಿ, ಮಲ್ಹಾರಿ ಪೋಳ ಸೇರಿದಂತೆ ಎಸ್ಡಿಎಮ್ಸಿ ಅಧ್ಯಕ್ಷ ಕುತುಬು ಮಿರ್ಜಾನಾಯ್ಕ, ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.