ರಾಜ್ಯಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ

 ಬೆಂಗಳೂರು/ಮಂಗಳೂರು, ನ.10 :         ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನ-ಮೀಲಾದುನ್ನಬಿ ದಿನಾಚರಣೆಯನ್ನು ಇಂದು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ  ಸುನ್ನಿ ಮುಸ್ಲಿಮರು ರವಿವಾರ ಮದ್ರಸ-ಮಸೀದಿಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿ, ಪ್ರವಾದಿಯ ಜೀವನ ಸಂದೇಶಗಳ ಬಗ್ಗೆ ಅರಿವು ಮೂಡಿಸಿದರು.  ಮಸೀದಿ ಹಾಗೂ ಮದ್ರಸಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಮಕ್ಕಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಹಿತ ವಿವಿಧ ಸ್ಪರ್ಧಿಗಳನ್ನು ಆಯೋಜಿಸಲಾಗಿದೆ. ಮುಸ್ಲಿಂ ಮೊಹಲ್ಲಾಗಳಲ್ಲಿ ಕಾಲ್ನಡಿಗೆಯೊಂದಿಗೆ ಮೀಲಾದ್ ಮೆರವಣಿಗೆ ನಡೆಯಿತು. ಕರಾವಳಿ ಜಿಲ್ಲೆಗಳಲ್ಲೂ ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಂಗಳೂರು ನಗರದ ಬಂದರ್ ಪ್ರದೇಶದಲ್ಲಿ ಅಲ್ ಅಝ್ಹರಿಯಾ, ಕಂಡತ್ ಪಳ್ಳಿ, ಮದೀನಾ ಮಸ್ಜಿದ್, ಮೊಯ್ದಿನ್ ಪಳ್ಳಿ, ನಡುಪಳ್ಳಿ  ಮುಂತಾದ ಮದ್ರಸಗಳ ಮಕ್ಕಳು ರವಿವಾರ ಬೆಳಗ್ಗೆ ಮೀಲಾದ್ ಮೆರವಣಿಗೆ ನಡೆಸಿದರು. ಮದ್ರಸಗಳ ಮುಅಲ್ಲಿಮರು, ಮಸೀದಿ, ಮದ್ರಸಗಳ ಆಡಳಿತ ಕಮಿಟಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪುತ್ತೂರು, ಬೆಳ್ತಂಗಡಿ, ಸುಳ್ಯ ಸೇರಿದಂತೆ ಕರಾವಳಿಯ ಬಹುತೇಕ ಕಡೆ ಮೆರವಣಿಗೆ ನಡೆದ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ಹಲವೆಡೆ ಜಾಥಾ ನಡೆದಿದೆ.