ತಾಳಿಕೋಟಿ 24; ಬೆಳಗಾವಿಯಲ್ಲಿ ಡಿಸೆಂಬರ್ 27ರಂದು ನಡೆಯಲಿರುವ ಗಾಂಧಿ ಭಾರತ ಸಮಾವೇಶದಲ್ಲಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತಾಗಲು ನಮ್ಮ ಪಕ್ಷದ ಮುಖಂಡರು ಶಕ್ತಿಮೀರಿ ಪ್ರಯತ್ನಿಸಬೇಕು ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರ ಡಿ. 27ರಂದು ಕಾಂಗ್ರೆಸ್ ಅಧಿವೇಶನ ನಡೆದಿತ್ತು, ಇದೀಗ ಇದಕ್ಕೆ ನೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಇದರ ಸವಿನೆನಪಿಗಾಗಿ ಡಿ. 27ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ಆಯೋಜಿಸಲಾಗಿದೆ ಇದು ಪ್ರತಿಯೊಬ್ಬ ಕಾಂಗ್ರೆಸ್ಸಿಗನಿಗೂ ಹೆಮ್ಮೆಯ ವಿಷಯವಾಗಿದೆ, ಸಮಾವೇಶದಲ್ಲಿ ಸಿಡಬ್ಲ್ಯೂ ಸಿ ಸದಸ್ಯರು, ಕೆಪಿಸಿಸಿ ಅಧ್ಯಕ್ಷರು ಸದಸ್ಯರು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ. ಈ ಸಮಾವೇಶವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದಾಗಿದ್ದು ಕ್ಷೇತ್ರದ ನಮ್ಮೆಲ್ಲಾ ಕಾರ್ಯಕರ್ತರು ತಮ್ಮ ತಮ್ಮ ಊರುಕೇರಿಗಳಿಂದ ಜನರನ್ನು ಕರೆತರುವುದರ ಜೊತೆಗೆ ಸಮಾವೇಶದ ಯಶಸ್ವಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಈ ವೇಳೆ ಪಕ್ಷದ ಮುಖಂಡರಾದ ಬಿ.ಎಸ್.ಪಾಟೀಲ (ಯಾಳಗಿ),ಸಿದ್ದನಗೌಡ ಪಾಟೀಲ ನಾವದಗಿ, ವಿಜಯಸಿಂಗ್ ಹಜೇರಿ, ಎಂ.ಕೆ.ಚೋರಗಸ್ತಿ, ಪ್ರಭುಗೌಡ ಮದರಕಲ್ಲ, ಅಕ್ಕಮಹಾದೇವಿ ಕಟ್ಟಿಮನಿ, ಸಂಗನಗೌಡ ಅಸ್ಕಿ, ಪರಶುರಾಮ ತಂಗಡಗಿ ಇದ್ದರು.