ಈರಯ್ಯ ಕಿಲ್ಲೇದಾರ ಕೃತಿಗಳಲ್ಲಿ ಗ್ರಾಮಭಾರತದ ನೈಜ ಚಿತ್ರಣ: ಚೌಗಲೆ

ಧಾರವಾಡ 17: ಇಂದಿನ ಗ್ರಾಮ ಭಾರತದ ಸಮಗ್ರ ಚಿತ್ರಣವನ್ನು ಕೊಡುವುದರ ಜೊತೆಗೆ ರೈತ ಅನುಭವಿಸುತ್ತಿರುವ ಸಂಕಷ್ಟಗಳನ್ನು ಮುನ್ನೆಲೆಗೆ ತರುವಲ್ಲಿ ಲೇಖಕ ಈರಯ್ಯ ಕಿಲ್ಲೇದಾರ ಅವರ ಯಶಸ್ವಿಯಾಗಿದ್ದಾರೆ ಎಂದು ನಾಟಕಕಾರ ಡಾ. ಡಿ.ಎಸ್.ಚೌಗಲೆ ಅವರು ಅಭಿಪ್ರಾಯಪಟ್ಟರು. 

ಅವರು ಇತ್ತೀಚೆಗೆ ಬೈಲಹೊಂಗಲ ತಾಲೂಕು ಗುಡಿಕಟ್ಟಿಯ ಕವಿತಾ ಪ್ರಕಾಶನ ಇವರು ಧಾರವಾಡದ ಕರ್ನಾ ಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಈರಯ್ಯ ಕಿಲ್ಲೇದಾರ ಅವರ 'ಬದನೆ ಪುರಾಣ' ಮತ್ತು 'ಬರೀ ಮಾಡ ಉರಿಯಿತ್ತು' ಎನ್ನುವ ಲಲಿತ ಪ್ರಬಂಧ ಮತ್ತು ಅಂಕಣ ಬರಹಗಳ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ಈರಯ್ಯ ಕಿಲ್ಲೇದಾರ ಅವರು ಒಬ್ಬ ಪ್ರತಿಭಾನ್ವಿತ ಬರಹಗಾರರಾಗಿದ್ದು ಕೃಷಿ ಹಿನ್ನೆಲೆಯ ಅಪ್ಪಟ ಅನುಭವಗಳನ್ನು ಅವರ ಪುಸ್ತಕಗಳಲ್ಲಿ ಕಾಣಬಹುದಾಗಿದೆ ಎಂದರು.  ಪ್ರತಿಯೊಂದು ವ್ಯವಸಾಯಕ್ಕೂ ಒಂದು ಭಾಷೆಯಿರುತ್ತದೆ. ಅಂತಹ ಗ್ರಾಮ್ಯ ಸೊಗಡಿನ ಭಾಷಾ ಹಂದರವನ್ನು ಈರಯ್ಯ ಅವರಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು. 

          ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ 'ಬದನೆ ಪುರಾಣ' ಪುಸ್ತಕದ ಬಗ್ಗೆ ಮಾತನಾಡಿ ರೈತ ಬದುಕಿನ ವಿಸ್ತಾರವಾದ ಅನುಭವಗಳನ್ನು ಗ್ರಾಮ ಬದುಕಿನ ಒಳನೋಟಗಳೊಂದಿಗೆ ಈರಯ್ಯ ಕಿಲ್ಲೇದಾರ ಅವರು ಕಟ್ಟಿಕೊಟ್ಟಿದ್ದಾರೆ ಎಂದರು. ಅವರ ಪ್ರಬಂಧಗಳಲ್ಲಿ ಕಥನ ಕುತೂಹಲವಿರುವುದು ಎದ್ದು ಕಾಣುವ ಅಂಶವಾಗಿದೆ ಎಂದರು. 'ಬರೀ ಮಾಡ ಉರಿಯಿತ್ತು' ಕೃತಿಯನ್ನು ಪರಿಚಯಿಸಿದ ಸವದತ್ತಿಯ ಲೇಖಕ ನಾಗೇಶ ನಾಯಕ ಅವರು ರೈತರ ಬವಣೆ ಮತ್ತು ಬದುಕಿನ ಹೋರಾಟಗಳನ್ನು ಕಿಲ್ಲೇದಾರ ಅವರು ಮನ ಮಿಡಿಯುವಂತೆ ಚಿತ್ರಿಸಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕತೆಗಾರ ಡಾ. ಬಸು ಬೇವಿನಗಿಡದ ಮಾತನಾಡಿ ಹೊಲ, ಮನೆ, ಆಸ್ತಿ, ಬೆಳ್ಳಿ-ಬಂಗಾರಕ್ಕೆ ವಾರಸುದಾರರು ಇರುವಂತೆ ಹೊಲದಲ್ಲಿ ರೆಂಟೆ-ಕುಂಟೆ ಹೊಡೆಯುವ, ಬಿತ್ತಿ ಬೆಳೆಯುವ ವಾರಸುದಾರರು ಇಲ್ಲವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು. ಈರಯ್ಯ ಅವರು ವಾಸ್ತವ ಪ್ರಜ್ಞೆ ಮತ್ತು ವಿನೋದ ಪ್ರಜ್ಞೆ ಇರುವ ಒಬ್ಬ ಅಪರೂಪದ ಲೇಖಕರಾಗಿದ್ದಾರೆ ಎಂದು ಬೇವಿನಗಿಡದ ಅವರು ಬಣ್ಣಿಸಿದರು. 

           ಲೇಖಕ ಈರಯ್ಯ ಕಿಲ್ಲೇದಾರ ಅವರು ಕೃಷಿಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾ ದೇವಗಿರಿ ಅವರು ಆರಂಭದಲ್ಲಿ  ಕೆ.ಎಸ್. ನರಸಿಂಹಸ್ವಾಮಿ ಅವರ 'ದೀಪವು ನಿನ್ನದೇ, ಗಾಳಿಯು ನಿನ್ನದೆ' ಭಾವಗೀತೆಯನ್ನು ಹಾಡಿದರು. ರಾಜೇಶ ಹೊಂಗಲ ಸ್ವಾಗತಿಸಿದರು. ಸಿದ್ಧರಾಮ ಹಿಪ್ಪರಗಿ ವಂದಿಸಿದರು. ಪ್ರೊ. ಶೇವಂತಿ ಕಾಂಬಳೆ ನಿರೂಪಿಸಿದರು. 

ಡಾ. ಚಂದ್ರಶೇಖರ ರೊಟ್ಟಿಗವಾಡ, ಲಕ್ಷ್ಮೀಕಾಂತ ಇಟ್ನಾಳ, ಜಯತೀರ್ಥ ಜಹಗೀರದಾರ, ಜಿ.ಬಿ.ಹೊಂಬಳ, ಡಾ. ಚಿದಾನಂದ ಕಮ್ಮಾರ, ರಾಮಚಂದ್ರ ಧೋಂಗಡೆ, ಶ್ರೀಧರ ಗಸ್ತಿ, ಉಮಾ ಬೇವಿನಗಿಡದ, ಪ್ರಭು ಕಿಲ್ಲೇದಾರ, ಎಸ್.ಬಿ. ಶಹಾಪುರಮಠ ಮತ್ತಿತರರು ಉಪಸ್ಥಿತರಿದ್ದರು.