ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಬಂಧನಕ್ಕೆ ಆಗ್ರಹ

ಬೆಂಗಳೂರು, ಜ.16 :          ಸಮಾಜದಲ್ಲಿ ಅಶಾಂತಿ ಕದಡುವ ಪ್ರಯತ್ನಕ್ಕೆ ಕೈಹಾಕಿರುವ ಬಿಜೆಪಿ ಶಾಸಕ ಸೋಮಶೇಖರ  ರೆಡ್ಡಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕ್ರಾಂತಿ ಸೇನೆ  ಸದಸ್ಯರು ಪ್ರತಿಭಟನೆ ನಡೆಸಿದರು. 

ನಗರದಲ್ಲಿಂದು  ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ, ಸೇನೆ ಕಾರ್ಯಕರ್ತರು, ಸೋಮಶೇಖರ  ರೆಡ್ಡಿ ತಮ್ಮ ಶಾಸಕ ಸ್ಥಾನಕ್ಕೆ ಗೌರವ ತರುವಂತಹ ಮಾತನಾಡಬೇಕು. ಅವರ ಹೇಳಿಕೆ ಹಿಂದೂ  ಮತ್ತು ಮುಸ್ಲಿಂ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವಂತಿದೆ ಎಂದು ದೂರಿದರು.

ಪ್ರತಿಭಟನೆಯನ್ನುದ್ದೇಶಿಸಿ  ಮಾತನಾಡಿದ ಸೇನೆ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸೈಫುಲ್ಲಾ, ಬಳ್ಳಾರಿಯ ಬಿಜೆಪಿ ಶಾಸಕ  ಸೋಮಶೇಖರ ರೆಡ್ಡಿ ಸಭೆಯೊಂದರಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ  ಮಾತನಾಡಿದ್ದರು. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಸೌಹಾರ್ದತೆ ಹಾಳುಮಾಡುವ  ಉದ್ದೆ?ಶದಿಂದ ಅವರು ಮಾತನಾಡಿದ್ದರೂ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಅವರನ್ನು  ಬಂಧಿಸಿಲ್ಲ ಎಂದು ದೂರಿದರು.

ಸಮಾಜದಲ್ಲಿ  ಅಶಾಂತಿ ಕದಡುವ, ಧರ್ಮಗಳ ನಡುವೆ ಸಂಘರ್ಷ ಉಂಟುಮಾಡುವ ಇಂತಹ ಹೇಳಿಕೆ ಖಂಡನೀಯ ಎಂದ  ಅವರು, ಸೋಮಶೇಖರ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಅವರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.