ಚಿಕ್ಕೋಡಿ 28: ಪ್ರಗತಿಪರ ರೈತನೋರ್ವ ಒಂದು ಎಕರೆ ಜಮೀನಿನಲ್ಲಿ 118 ಟನ್ ಕಬ್ಬು ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ.
ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದ ರಾಮಚಂದ್ರ ನಿಕಾಡೆ ಅವರು ಒಂದು ಎಕರೆ ಪ್ರದೇಶದಲ್ಲಿ 118 ಟನ್ ಕಬ್ಬು ಉತ್ಪಾದನೆ ಮಾಡಿದ್ದಾರೆ. ಗಡಿ ಭಾಗದಲ್ಲಿ ಪ್ರಗತಿಪರ ರೈತ ಎಣಿಸಿಕೊಂಡಿರುವ ರಾಮಚಂದ್ರ ನಿಕಾಡೆ ಅವರು ಕಳೆದ 2023 ಆಗಷ್ಟ ತಿಂಗಳಲ್ಲಿ 4.5 ಪುಟ್ ಸಾಲಿನಲ್ಲಿ 86032 ತಳಿಯ ಕಬ್ಬು ನಾಟಿ ಮಾಡಿದ್ದರು. ಇದೀಗ ಕಬ್ಬು ಕಟಾವು ಕಾರ್ಯ ನಡೆದಿದ್ದು ಎಕರೆಗೆ 118 ಟನ್ ಇಳುವರಿ ಬಂದಿದ್ದರಿಂದ ರೈತನ ಮೊಗದಲ್ಲಿ ಸಂತಸ ಮೂಡಿದೆ.
ಕಬ್ಬು ನಾಟಿ ಮಾಡುವ ಮೊದಲು ಭೂಮಿಯನ್ನು ಸಮರ್ಕವಾಗಿ ಹದಗೊಳಿಸಿ ಸಗಣಿ ಗೊಬ್ಬರ ಹಾಕಲಾಗಿತ್ತು. ನಂತರ ಕಬ್ಬು ನಾಟಿ ಮಾಡಿದ ಬಳಿಕ ರೋಗಗಳ ಹರಡದಂತೆ ವಿವಿಧ ರಾಸಾಯನಿಕ ಕೀಟನಾಶಕ ಸಿಂಪಡಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ಬೆಳೆಗೆ ನೀರು ಮತ್ತು ಗೊಬ್ಬರ ಹಾಕಿದ ಪರಿಣಾಮ ಕಬ್ಬಿನ ಬೆಳೆ ಹುಲಸಾಗಿ ಬಂದಿದೆ. ಇದೀಗ ಕಬ್ಬು ಕಟಾವು ಆರಂಭವಾಗಿದ್ದರಿಂದ ಪ್ರತಿ ಕಬ್ಬು 30 ರಿಂದ 35 ಗಣಿಕೆ ಕಟ್ಟಿದೆ. ಸುಮಾರು 20 ಪುಟ್‌ಗಳಷ್ಟು ಕಬ್ಬು ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ರೈತರಿಗೆ ಸಹಾಯ ಸಹಕಾರ ನೀಡುತ್ತಿರುವ ಹಾಲಸಿದ್ದನಾಥ ಕಾರ್ಖಾನೆ: ಗಡಿ ಭಾಗದ ರೈತರ ಕಾಮದೇನುವಾಗಿ ಕೆಲಸ ಮಾಡುತ್ತಿರುವ ನಿಪ್ಪಾಣಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯು ಕಬ್ಬು ನಾಟಿ ಮಾಡುವ ರೈತರಿಗೆ ಸೂಕ್ತ ಮಾರ್ಗದರ್ಶನ ಮತ್ತು ವಿವಿಧ ಸೌಲಭ್ಯಗಳನ್ನು ನೀಡಿ ಉತ್ತಮ ಇಳುವರಿ ಪಡೆಯುವ ರೈತರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದೆ. ಕಾರ್ಖಾನೆಯು ಕಬ್ಬಿನ ಸಸಿ ವಿತರಣೆ, ರಾಸಾಯನಿಕ ಗೊಬ್ಬರಗಳಿಗೆ ಆರ್ಥಿಕ ನೆರವು ಮತ್ತು ಹೆಚ್ಚು ಇಳುವರಿ ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಕಾರ್ಖಾನೆ ಮಾಡುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ವಿಶ್ವಜೀತ ಪಾಟೀಲ ಅವರು ಸಮಯಕ್ಕೆ ಸರಿಯಾಗಿ ಮಾರ್ಗದರ್ಶನ ಮಾಡಿರುವ ಪರಿಣಾಮ ಕಬ್ಬು ಉತ್ಪಾದನೆಯಲ್ಲಿ ಹೆಚ್ಚು ಇಳುವರಿ ಬಂದಿದೆ ಎನ್ನುತ್ತಾರೆ ರೈತ ರಾಮಚಂದ್ರ ನಿಕಾಡೆ.