ಹಿಂದಿನ- ಇಂದಿನ ದಿನಗಳಲ್ಲಿ ಮಹಿಳೆಯರ ಸ್ಥಿತಿಗತಿಯಲ್ಲಿ ಸಾಕಷ್ಟು ಬದಲಾವಣೆ: ಮೆಣಸೆ
ವಿಜಯಪುರ 16: ಹಿಂದಿನ ಕಾಲದಲ್ಲಿ ಮಹಿಳೆಯರ ಸ್ಥಿತಿ ಬಹಳ ಕಷ್ಟಕರವಾಗಿತ್ತು, ಮಹಿಳೆಯರ ಸ್ಥಿತಿಗತಿ ಬದಲಾಯಿಸಲು ಮಹಾತ್ಮಾ ಗಾಂಧಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಹಲವಾರು ನಾಯಕರು ಶ್ರಮಿಸಿದ್ದಾರೆ ಎಂದು ಬೆಳಗಾವಿಯ ಜಿ.ಎಸ್.ಎಸ್ ಕಾಲೇಜಿನ ಸೇವಾನಿವೃತ್ತ ಪ್ರಾಂಶುಪಾಲ ಆನಂದ ಕೃಷ್ಣಾ ಮೆಣಸೆ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಮತ್ತು ಆಗಸ್ಟ್ ಕ್ರಾಂತಿ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಮಹಾತ್ಮಾ ಗಾಂಧಿ ಮತ್ತು ಭಾರತೀಯ ಮಹಿಳೆ’ ಎಂಬ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಪುಲೆ, ಗಂಗೂಬಾಯಿ ಹಾನಗಲ್ಲ ಸೇರಿದಂತೆ ಹಲವಾರು ಮಹಾನ್ ಮಹಿಳೆಯರು ಇತಿಹಾಸದಲ್ಲಿ ತಮ್ಮದೆಯಾದ ಚಾಪು ಮೂಡಿಸಿದ್ದಾರೆ. ಹಿಂದಿನ ಕಾಲಕ್ಕೂ ಮತ್ತು ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಸ್ಥಿತಿಗತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಗಾಂಧೀಜಿಯವರ ಮೌಲ್ಯಗಳು, ತತ್ವಗಳು ಸಾರ್ವಕಾಲಿಕ ಸತ್ಯವಾಗಿವೆ. .ಗಾಂಧೀಜಿಯ ವಿಚಾರಗಳು ಶತಮಾನಕ್ಕೂ ಹಳೆಯದು. ಮಹಿಳೆಗೆ ತನ್ನದೇ ಆದ ಅಸ್ಮಿತೆ, ವ್ಯಕ್ತಿತ್ವ ಇದೆ. ಹಾಗೆಯೇ ಮಹಿಳೆಗೆ ಸಮ ಅವಕಾಶ ಮತ್ತು ಸೌಲಭ್ಯಗಳು ಸಿಗಬೇಕು. ಮಹಿಳೆಗೆ ಆಂತರಿಕ ಸಾಮರ್ಥ್ಯ ಕೌಶಲ್ಯಗಳನ್ನು ಅಭಿವ್ಯಕ್ತಗೊಳಿಸಲು ತರಬೇತಿ ಕೊಡಬೇಕು. ಅಬಲತೆಯಿಂದ ಸಬಲತೆಯ ಕಡೆಗೆ ಮಹಿಳೆಯರನ್ನು ಕರೆದುಕೊಂಡು ಹೋಗಬೇಕಾಗಿದೆ ಎಂದರು.
ವಿಜಯಪುರದ ಗಾಂಧಿ ಭವನ ನಿರ್ವಹಣಾ ಸಮಿತಿ ಸದಸ್ಯ ಹಾಗೂ ಖಾದಿ ಗ್ರಾಮೋದ್ಯೋಗ ಅಧ್ಯಕ್ಷ ಬಾಪುಗೌಡ ಪಾಟೀಲ್ ಮಾತನಾಡಿ, 1924-25ರ ಚರಕ ಸಂಘದ ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಹಾಗೂ ದೇಶದಲ್ಲಿ ಬದಲಾವಣೆ ತರಲು ಖಾದಿ ಗ್ರಾಮೋದ್ಯೋಗದಿಂದ ಸಹಾಯಕವಾಯಿತು. ಪರಿಸರ ರಕ್ಷಣೆ, ಜಲಸಂಪನ್ಮೂಲ ರಕ್ಷಣೆ, ವ್ಯಸನಮುಕ್ತ ಭಾರತ ಹೀಗೆ ಗಾಂಧೀಜಿಯ ಕನಸು ನನಸಾಗಬೇಕು ಎಂದರು.
ಆಗಸ್ಟ್ ಕ್ರಾಂತಿ ಟ್ರಸ್ಟ್ ಸದಸ್ಯೆ ರೇವತಿ ಕಟ್ಟಿ ಆಗಸ್ಟ್ ಕ್ರಾಂತಿಯ ಬಗ್ಗೆ ಪರಿಚಯಿಸಿದರು. ಬೆಂಗಳೂರಿನ ಗಾಂಧಿವಾದಿ ಅಪ್ಪಾಸಾಹೇಬ ಯರನಾಳ, ವಿವಿಯ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉವಿವಿಯ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಅಮರನಾಥ ಪ್ರಜಾಪತಿ ಸ್ವಾಗತಿಸಿ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪಲ್ಲವಿ ತಾಟೆ ನಿರೂಪಿಸಿದರು.