ಎತ್ತು-ಆಕಳು ಇರುವ ಮನೆ ಧರ್ಮದ ಮನೆಯಾಗಿರುತ್ತದೆ: ಸಿದ್ದಪ್ಪ ಬಿದರಿ

ಸತ್ಸಂಗದಲ್ಲಿ ವಿಜಯಕುಮಾರ ಹಿರೆಸೋಮಣ್ಣವರ ದಂಪತಿಯನ್ನು ಸನ್ಮಾನಿಸಲಾಯಿತು

ಜಮಖಂಡಿ 26: ಕಟ್ಟಿದ ಮನೆ ಸಿಂಗಾರ ಕಾಣಬೇಕಾದರೆ ಮನೆಯಲ್ಲಿ ದನ, ಮಕ್ಕಳು-ಮರಿ ಇರಬೇಕು. ಎತ್ತು-ಆಕಳು ಇರುವ ಮನೆ ಧರ್ಮದ ಮನೆಯಾಗಿರುತ್ತದೆ. ಒಕ್ಕಲುತನ ಮನೆಯಲ್ಲಿ ಪರಮಾತ್ಮ ನೆಲೆಸಿರುತ್ತಾನೆ. ರೈತನೇ ಎರಡನೆಯ ಪರಮಾತ್ಮ ಎಂದು ಬೀಳಗಿಯ ಜಾನಪದ ಕಲಾವಿದ ಸಿದ್ದಪ್ಪ ಬಿದರಿ ಹೇಳಿದರು. 

ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಆಯೋಜಿಸುವ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಜಾನಪದರು ಮತ್ತು ಜಾನಪದ ಸಂಸ್ಕೃತಿ ಕುರಿತು ಮಾತನಾಡಿದರು. 

ರೈತರು ತಮ್ಮ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವುದಿಲ್ಲ. ರೈತರ ಮಕ್ಕಳಿಗೆ ಹೆಣ್ಣು ಕೊಡಬೇಕು. 10-12 ಜಾನುವಾರು ಸಾಕುವ, ನೂರಾರು ಜನರನ್ನು ಸಲಹುವ ರೈತನಿಗೆ ತನ್ನ ಹೆಂಡತಿಯನ್ನು ಸಲುಹುದಾಗದೆ ಎಂದು ಖಾರವಾಗಿ ಪ್ರಶ್ನಿಸಿದ ಅವರು ಒಕ್ಕಲುತನಕ್ಕೆ ಒತ್ತು ಕೊಟ್ಟು ದುಡಿಯುವವರ ಮನೆ ಬಂಗಾರವಾಗುತ್ತೆ ಎಂದರು. 

ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸತ್ಯವನ್ನು ತಿಳಿಯಲು, ನನ್ನನ್ನು ನಾನು ಅರಿಯಲು, ದೇಹ ಯಾರು? ನಾನು ಯಾರು? ಎಂದು ಅರಿತುಕೊಳ್ಳಲು ಸತ್ಸಂಗ ಬೇಕು. ಜಗತ್ತು, ಜೀವ, ಪರಮಾತ್ಮ, ಜಗತ್ತಿನಲ್ಲಿರುವ ಬಂಧನ, ಮಾಯೆ ಕುರಿತು ಚಿಂತನೆ ಮಾಡಲು ಸತ್ಸಂಗ ಅಗತ್ಯ. ಆತ್ಮ, ಜೀವ ಬಹಳ ಸೂಕ್ಷ್ಮವಾಗಿವೆ. ಆತ್ಮನನ್ನು ಮನಸ್ಸು ಆವರಿಸಿರುತ್ತದೆ. ಮನಸ್ಸಿಗೆ ಅದ್ಭುತ ಶಕ್ತಿಯಿದೆ. ಆದರೆ, ಮಾತು ಮನಸ್ಸನ್ನು ನಿಯಂತ್ರಿಸುತ್ತದೆ. ಮಾತಿನಂತೆ ಮನಸ್ಸು ಬದಲಾಗುತ್ತದೆ. ಹಾಗಾಗಿ ಮಾತು ಶುದ್ಧವಾದರೆ, ದೇಹ ಶುದ್ಧವಾಗುತ್ತದೆ. ಸತ್ಸಂಗದಿಂದ ಮಾತುಗಳು ಶುದ್ಧಿಯಾಗುತ್ತವೆ. ಮಾತುಗಳು ಶುದ್ಧಿಯಾದರೆ ಮನ, ಬುದ್ಧಿ, ಚಿತ್ತ ಶುದ್ಧಿಯಾಗುತ್ತವೆ ಎಂದು ಆಶೀರ್ವಚನ ನೀಡಿದರು. 

ಮಹಾಪ್ರಸಾದದ ಸೇವೆ ಮಾಡಿದ ವಿಜಯಕುಮಾರ ಹಿರೆಸೋಮಣ್ಣವರ ದಂಪತಿ, ಜಯಕುಮಾರ ಹಿರೆಸೋಮಣ್ಣವರ ದಂಪತಿ, ಪಿಎಸ್‌ಐ ಹುದ್ದೆಗೆ 56ನೇ ರಾ​‍್ಯಂಕ್‌ನೊಂದಿಗೆ ಆಯ್ಕೆಯಾಗಿರುವ ಶಿವರಾಜ ಗುರುಬಸುಗೌಡ ಪಾಟೀಲ, ತುಂಗಳ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಅಶೋಕ ತುಂಗಳ, ಡಾ.ಲಕ್ಷ್ಮೀ ತುಂಗಳ ದಂಪತಿ, ವಿಶೇಷ ಸಾಧಕ ಸಂಗಮೇಶ ಮಲಕಪ್ಪನವರ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು. 

ಶ್ರೀಮಠದ ಸಾಧಕರಾದ ಶಾಸ್ತ್ರೀ ಇದ್ದರು. ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ರಮೇಶ ಬಾಡನವರ, ಪುಂಡಲೀಕ ಭಜಂತ್ರಿ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.