ಶಾಶ್ವತ ನೀರಾವರಿಗೆ ಸರ್ಕಾರದಿಂದ ಅನುದಾನ: ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಮರೇಶ

ಲೋಕದರ್ಶನ ವರದಿ

ಕೊಪ್ಪಳ 10: ಹಲವಾರು ವರ್ಷಗಳಿಂದ ಮಳೆ ಇಲ್ಲದೆ ಬರ ಅನುಭವಿಸುತ್ತಿರುವ ಕೊಪ್ಪಳ ಭಾಗದ ರೈತರು, ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನಮ್ಮ ಜೀವನಾಡಿ ತಾಲ್ಲೂಕಿನ ಹಿರೇಹಳ್ಳ ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸುವ ನಿಟ್ಟಿನಲ್ಲಿ 89.86 ಕೋಟಿ ಅನುದಾನ ಮಂಜೂರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಕೊಪ್ಪಳ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಮರೇಶ ಕರಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸುಮಾರು ವರ್ಷಗಳಿಂದ ಹಿರೇಹಳ್ಳ ಜಲಾಶಯಕ್ಕೆ ಶಾಶ್ವತ ನೀರು ಒದಗಿಸುವಂತೆ ಹೋರಾಟ, ಒತ್ತಾಯಗಳು ಇದ್ದವು. ಶಾಶ್ವತ ನೀರು ಹರಿದು ಬಂದರೆ ಕುಡಿಯಲು, ರೈತರ ಜಮೀನುಗಳಿಗೆ ಹೆಚ್ಚು ಉಪಯುಕ್ತವಾಗುವುದಲ್ಲದೆ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಪಂಪ್ಸೆಟ್ಗಳಿಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಜಲಾಶಯಕ್ಕೆ ಶಾಶ್ವತ ನೀರು ಹರಿಸುವ ನಿಟ್ಟಿನಲ್ಲಿ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 89.86 ಕೋಟಿ ಹಣ ನೀಡಲು ಒಪ್ಪಿಗೆ ಸೂಚಿಸಿದೆ. ಈ ಕುರಿತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಕರ್ಾರದ ಕಾರ್ಯದರ್ಶಿ  ಸಿ. ಮೃತ್ಯುಂಜಯಸ್ವಾಮಿ ಸಕರ್ಾರದ ಆದೇಶ ತಿಳಿಸಿದ್ದಾರೆ. ಶೀಘ್ರದಲ್ಲೆ ಕಾಮಗಾರಿ ಆರಂಭಿಸಿ ನೀರು ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಹಿರೇಹಳ್ಳ ಜಲಾಶಯ ಭಾಗದಲ್ಲಿ 2 ಬ್ಯಾರೇಜ್ ಇವೆ, ಇನ್ನು 6 ಬ್ಯಾರೇಜ್ಗಳು ನಿರ್ಮಾಣದ ಹಂತದಲ್ಲಿವೆ. ತುಂಗಾಭದ್ರಾ ನದಿಯಿಂದ 38.56 ಕಿಮೀ ಉದ್ದದ ಪೈಪ್ಲೈನ್ ನಿರ್ಮಾಣ ಮಾಡಿ ಜಲಾಶಯಕ್ಕೆ ಒಟ್ಟು 0.203 ಟಿಎಂಸಿ ನೀರು ತರಲಾಗುವುದು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಲಿಫ್ಟ್ ಮಾಡಿ ಜಲಾಶಯ ಭರ್ತಿ  ಮಾಡಿಕೊಂಡು ಹಿರೇಹಳ್ಳ ಸುತ್ತಮುತ್ತ ಇರುವ ಒಟ್ಟು 19 ಹಳ್ಳಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ನಮ್ಮ ಭಾಗದ ಜನತೆಯ ಕೂಗಿಗೆ ಸ್ಪಂದಿಸಿದ ನೆಚ್ಚಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು, ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ, ಇಲಾಖೆ ಪ್ರಧಾನ ಕಾರ್ಯದರ್ಶಿ  ಮೃತ್ಯುಂಜಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ, ಸಂಸದರಾದ ಸಂಗಣ್ಣ ಕರಡಿ ಹಾಗೂ ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರಿಗೆ ಕ್ಷೇತ್ರದ ಹಾಗೂ ತಾಲೂಕಿನ ಜನತೆ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದ್ದಾರೆ.