ಲೋಕದರ್ಶನವರದಿ
ಮಹಾಲಿಂಗಪುರ 18: ಸಮೀಪದ ಸೈದಾಪುರ ಗ್ರಾಮದ ಹೊರವಲಯದಲ್ಲಿ ಮುಧೋಳ-ನಿಪ್ಪಾಣಿ ಹೆದ್ದಾರಿ ಪಕ್ಕದಲ್ಲಿ ಭಾನುವಾರ ಅಮೋಘಸಿದ್ಧನ ಜಾತ್ರೆ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆ 5 ಗಂಟೆಗೆ ಹೋಮ ಪೂಜೆಯೊಂದಿಗೆ ರುದ್ರಾಭಿಷೇಕ ಜರುಗಿತು. ಶಿವಲಿಂಗೇಶ್ವರ, ಮಾರುತೇಶ್ವರ ಮತ್ತು ಯಲ್ಲಮ್ಮ ದೇವಿ ಪಲ್ಲಕ್ಕಿಗಳು ನಂದಿಕೋಲು, ಕರಡಿಮೇಳ ಹಾಗೂ ಡೊಳ್ಳಿನ ವಾಲಗದೊಂದಿಗೆ ಅಮೋಘಸಿದ್ಧನ ಗದ್ದುಗೆಗೆ ಆಗಮಿಸಿದವು.
ಮಧ್ಯಾಹ್ನ 3 ಗಂಟೆಗೆ ಪವಾಡ ಪುರುಷರ ಧರ್ಮಭೇಟಿ ಕಾರ್ಯಕ್ರಮ ಜರುಗಿತು. ನಾಗರಾಳದ ಗುರು ಸೋಮಲಿಂಗೇಶ್ವರ, ಅಮೋಘಸಿದ್ದೇಶ್ವರ, ನಿಪನಾಳ ಮತ್ತು ಹಾರೂಗೇರಿ ಅರಣ್ಯಸಿದ್ದೇಶ್ವರ ಪಲ್ಲಕ್ಕಿಗಳು ಆಗಮಿಸಿದ್ದವು. ವಾಲಗ ಘರ್ಜನೆ ಪ್ರದರ್ಶನದ ನಂತರ ಮಹಾಪ್ರಸಾದ ಜರುಗಿತು. ಸಂಜೆಯವರೆಗೆ ಎಂಟು ಊರುಗಳ ಪಲ್ಲಕ್ಕಿಗಳನ್ನು ಹೊತ್ತ ಭಕ್ತರು ಪೈಪೋಟಿ ಮೇರೆಗೆ ಗದ್ದೆಯಲ್ಲಿ ಗದ್ದುಗೆಯ ಸುತ್ತ ಕುಣಿದಾಡಿ, ಓಡಾಡಿ ಭಕ್ತಿಯ ಮತ್ತು ಶಕ್ತಿಯ ಮೇಲಾಟ ಪ್ರದಶರ್ಿಸಿದರು.
ಡೊಳ್ಳು ಬಡಿತ, ಪಲ್ಲಕ್ಕಿಗಳ ಕುಣಿತ ಹಾಗೂ ಭಂಡಾರದ ಎಸೆತವನ್ನು ಸಾವಿರಾರು ಭಕ್ತರು ಸುತ್ತಲೂ ನಿಂತು ನೋಡಿ ಕಣ್ತುಂಬಿಕೊಂಡರು. ರಾತ್ರಿ ಡೊಳ್ಳಿನ ಪದಗಳ ಕಾರ್ಯಕ್ರಮ ಮುಂದುವರೆಯಿತು. ನ.18 ರಂದು ಬೆಳಗ್ಗೆ ಮಹಾ ಮಂಗಳಾರತಿಯೊಂದಿಗೆ ಭಂಡಾರ ಒಡೆದು ತೂರಾಡುವ ಮೂಲಕ ಜಾತ್ರೆ ಸಮಾರೋಪಗೊಂಡಿತು.
ಸೈದಾಪುರ ಅಮೋಘಸಿದ್ದೇಶ್ವರ ಜಾತ್ರಾ ಕಮಿಟಿಯಲ್ಲಿ ಪಾಟೀಲ ಮನೆತನದ ರಾಮನಗೌಡ, ಕಲ್ಲನಗೌಡ, ಶಿವನಗೌಡ, ಭೀಮನಗೌಡ, ರಂಗನಗೌಡ, ಮಲಗೌಡ, ಗೌಡಪ್ಪ ಹಾಗೂ ಶಿವಲಿಂಗಪ್ಪ ಮುಗಳಖೋಡ, ಮಹಾಲಿಂಗಪ್ಪ ಸನದಿ, ರಮೇಶ ಚಿಂಚಲಿ, ಶಿವಪ್ಪ ಬನಟ್ಟಿ, ಚೇತನ ಹಾದಿಮನಿ, ಸಿದ್ದಪ್ಪ ಹೊಸವಾಲಿಕಾರ, ಮಲಕಾರಿ ಬೆಳಗಲಿ ಸೇರಿದಂತೆ ಹಲವರು ಇದ್ದರು.