ಆರೋಗ್ಯ ಇಲಾಖೆಯಲ್ಲಿ ದೊರಕುವ ಗುಣಮಟ್ಟ ಸೇವೆ ಪಡೆದುಕೊಳ್ಳಲು ಕರೆ,

A call to get the quality service available in the health department

 ಆರೋಗ್ಯ ಇಲಾಖೆಯಲ್ಲಿ ದೊರಕುವ ಗುಣಮಟ್ಟ ಸೇವೆ ಪಡೆದುಕೊಳ್ಳಲು ಕರೆ 

ಬಳ್ಳಾರಿ 28: ರಾಜ್ಯ ಸರ್ಕಾರವು ‘ನಿಮ್ಮ ಆರೋಗ್ಯ ನಮ್ಮ ಬದ್ದತೆ’ ಎಂಬ ಧ್ಯೇಯ ವಾಕ್ಯದಡಿ ಸಮುದಾಯಕ್ಕೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಅವರು ಹೇಳಿದರು. 

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ 48.25 ಲಕ್ಷ ಅನುದಾನದಡಿ ಸಿರುಗುಪ್ಪ ತಾಲ್ಲೂಕಿನ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಲಾದ ಹೆಚ್ಚುವರಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌, ವೈದ್ಯರ ಕೊಠಡಿ, ಚುಚ್ಚುಮದ್ದು ಕೊಠಡಿ, ಓಷಧಿ ವಿತರಣೆ ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಆಸ್ಪತ್ರೆಗಳಲ್ಲಿ ಸುಸಜ್ಜಿತ ಉಪಕರಣಗಳು ನುರಿತ ವೈದ್ಯರು ಹಾಗೂ ಸಿಬ್ಬಂದಿ ಒದಗಿಸಿದ್ದು, ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸುಸಜ್ಜಿತ ಕಟ್ಟಡಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ನಡೆಯುತ್ತಿವೆ. ಇದು ನಿಮ್ಮ ಆಸ್ಪತ್ರೆ ಎಂಬ ಭಾವನೆಯೊಂದಿಗೆ ಜನತೆಯು ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬೇಕು. ಇನ್ನು ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ಕಾರ್ಯಗಳಿಗೆ ಬೆಂಬಲಿಸಬೇಕು ಎಂದರು. 

ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳು ಹತ್ತಿರದಲ್ಲೇ ದೊರೆಯುವುದರಿಂದ ಅನಗತ್ಯ ಆರ್ಥಿಕ ಹೊರೆ ತಪ್ಪಿಸುವ ಕಾರ್ಯ ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು. 

ಹಳೆ ಕಟ್ಟಡಗಳನ್ನು ತೆರೆವುಗೊಳಿಸಿ ಹೊಸ ಕಟ್ಟಡಗಳ ನಿರ್ಮಾಣ ಮತ್ತು ಅಗತ್ಯ ಇರುವ ಆಸ್ಪತ್ರೆಗಳಿಗೆ ಸುಸಜ್ಜಿತ ಉಪಕರಣಗಳನ್ನು ಒದಗಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಕಾರ್ಯಕ್ಕೆ ನಿರಂತರವಾಗಿ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ಈಗಾಗಲೇ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇಲ್ಲದಂತೆ ಸರ್ಕಾರವು ಕ್ರಮವಹಿಸಿದ್ದು, ಅಗತ್ಯ ಇರುವ ಆರೋಗ್ಯ ಕೇಂದ್ರಗಳಿಗೆ ನಿಯಮಾನುಸಾರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತಲಿದೆ. ಮುಂದಿನ ದಿನಗಳಲ್ಲಿ ಸಿರುಗುಪ್ಪ ತಾಲ್ಲೂಕಿನಲ್ಲಿಯೇ ಹೆರಿಗೆಗಾಗಿ ತಾಯಿ ಮಗುವಿನ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಶಾಸಕರು ಹೇಳಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ..ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಹೆರಿಗೆಗೆ ಆಗಮಿಸುವ ಗರ್ಭಿಣಿ ಮಹಿಳೆಯರ ಆರೈಕೆಗೋಸ್ಕರ ಹೆರಿಗೆ ದಿನಾಂಕದ 3 ದಿನ ಮೊದಲು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ಗರ್ಭಿಣಿಯರಲ್ಲಿರುವ ಆರೋಗ್ಯ ಸಮಸ್ಯೆಗಳನ್ನು ಗುರ್ತಿಸಿ ಸರಳ ಹೆರಿಗೆ ಕೈಗೊಳ್ಳಲು ಅಥವಾ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲು ಸಹಾಯಕವಾಗಲಿದೆ ಎಂದರು. 

ರಕ್ತಹೀನತೆ ಇರುವವರಿಗೆ ಎಫ್‌.ಸಿ.ಎಮ್ ಹಾಗೂ ಐರನ್ ಸುಕ್ರೋಸ್ ಚುಚ್ಚಮದ್ದು ಉಚಿತವಾಗಿ ನೀಡಲಾಗುತ್ತಿದ್ದು, ಪ್ರತಿ 9 ಮತ್ತು 24 ರಂದು ಪ್ರಧಾನಮಂತ್ರಿ ಮಾತೃತ್ವ ಅಭಿಯಾನದಡಿ ತಪಾಸಣೆಯೊಂದಿಗೆ ಪೌಷ್ಠಿಕ ಆಹಾರದ ಬೆಂಬಲವಾಗಿ ಊಟದ ವ್ಯವಸ್ಥೆ ಸಹ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾರದಮ್ಮ, ಸ್ಥಳದಾನಿಗಳಾದ ರಂಗಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರೇಶ ಗೌಡ, ವಿರುಪಾಕ್ಷಿ ಗೌಡ, ಬದ್ರಿ ಗೌಡ, ಆಡಳಿತ ವೈದ್ಯಾಧಿಕಾರಿ ಡಾ.ಸುನಿಲ್, ಜನಾರೋಗ್ಯ ಸಮಿತಿ ಸದಸ್ಯರು ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು. 

ಸನ್ಮಾನ: ಸ್ಥಳದಾನಿಗಳಾದ ರಂಗಾರೆಡ್ಡಿ ಹಾಗೂ ಕುಟುಂಬದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.