ಕಲಬುರಗಿಯಲ್ಲಿ 52 ವರ್ಷದ ವ್ಯಕ್ತಿಗೆ ಕೊರೊನಾ ದೃಢ: ಸೋಂಕಿತರ ಸಂಖ್ಯೆ 64ಕ್ಕೇರಿಕೆ

ಕಲಬುರಗಿ,  ಮೇ 6, ಸೂರ್ಯ ನಗರಿ ಕಲಬುರಗಿಯಲ್ಲಿ‌ ಕೊರೊನಾ ಸೋಂಕು‌ ಬಿಸಿಲು ತಾಪಕ್ಕಿಂತ  ಹೆಚ್ಚಾಗಿ ಏರಿಕೆ ಆಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 64 ಏರಿಕೆ‌  ಕಂಡಿದೆ‌.
ಬುಧವಾರ ಕಲಬುರಗಿ  ನಗರದ ರೋಗಿ ಸಂಖ್ಯೆ-610ರ ನೇರ ಸಂಪರ್ಕಕ್ಕೆ ಬಂದ ಗಾಜೀಪುರ ಪ್ರದೇಶದ 52 ವರ್ಷದ  ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ.  ತಿಳಿಸಿದ್ದಾರೆ.ಜಿಲ್ಲೆಯಲ್ಲಿ  ಕೊರೊನಾ ಪೀಡಿತ 64 ರೋಗಿಗಳಲ್ಲಿ 6 ಜನ ನಿಧನ‌ರಾಗಿದ್ದು, 24 ರೋಗಿಗಳು ಗುಣಮುಖರಾಗಿ  ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 34 ರೋಗಿಗಳಿಗೆ ಚಿಕಿತ್ಸೆ‌  ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪದೇ ಪದೇ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು, ಜನತೆ ಮತ್ತಷ್ಟು ಆತಂಕಕೀಡಾಗಿದ್ದಾರೆ.ಕಲಬುರಗಿಯ ಮಹೆಬೂಬ್ ನಗರದ 50 ವರ್ಷದ ಪುರುಷ (ರೋಗಿ ಸಂಖ್ಯೆ-394)  ಮತ್ತು ಮೋಮಿನಪುರ ಪ್ರದೇಶದ 19 ವರ್ಷದ ಯುವಕ (ರೋಗಿ ಸಂಖ್ಯೆ-395) ಅವರು ಕೊರೊನಾ  ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಬುಧವಾರ  ಆಸ್ಪತ್ರೆಯಿಂದ  ಬಿಡುಗಡೆಗೊಳಿಸಲಾಗಿದೆ ಎಂದು ಶರತ್‌  ಬಿ. ತಿಳಿಸಿದ್ದಾರೆ.ಇವರಿಬ್ಬರಿಗೂ ಏ.20ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಒಳಪಟ್ಟಿದ್ದರು ಎಂದರು.ಕಲಬುರಗಿ  ಜಿಲ್ಲೆಯಲ್ಲಿ ಇದೂವರೆಗೆ ಕೊರೊನಾ ಪಾಸಿಟಿವ್ ಪತ್ತೆಯಾದ 64ರಲ್ಲಿ ಒಟ್ಟು 24 ರೋಗಿಗಳು  ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 6 ಜನ ನಿಧನ  ಹೊಂದಿದ್ದು, 34 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು  ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.