ಕಾರ್ಮಿಕರ ಕಲ್ಯಾಣಕ್ಕೆ 641.26 ಕೋಟಿ ರೂ.ವಿನಿಯೋಗ; ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು, ಜ29 :     ಇಲ್ಲಿಯವರೆಗೆ ಕಾರ್ಮಿಕರ ಕಲ್ಯಾಣ ಸೌಲಭ್ಯಗಳಿಗೆ 641.26 ಕೋಟಿ ರೂ. ವಿನಿಯೋಗಿಸಲಾಗಿದೆ ಹಾಗೂ ಕಾರ್ಮಿಕ ಇಲಾಖೆಯ ಕಾಯ್ದೆಯಡಿ ಒಳಪಡುವ ಎಲ್ಲ ಕಟ್ಟಡ ಮತ್ತು ಇತರೆ ಕಾಮಗಾರಿಗಳ ನೊಂದಣಿ ಪ್ರಮಾಣಪತ್ರವನ್ನು ವಿತರಿಸುವ ಜವಾಬ್ದಾರಿಯನ್ನು ಸ್ವತಃ ಕಾರ್ಮಿಕ ಇಲಾಖೆಯೆ ವಹಿಸಿಕೊಂಡಿದ್ದು, ಇದುವರೆಗೂ 4718 ಸಂಸ್ಥೆಗಳನ್ನು ನೊಂದಾಯಿಸಿಕೊಂಡಿದೆ ಎಂದು ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.  

ಕಟ್ಟಡ ನಿರ್ಮಾಣ ಕಾರ್ಮಿಕರ ಸುರಕ್ಷತೆ, ಆರೋಗ್ಯ, ಕಲ್ಯಾಣ ಮತ್ತು ಕಟ್ಟಡ ಕಾರ್ಮಿಕರ ಸುರಕ್ಷತೆಯನ್ನು ಖಾತರಿಪಡಿಸಲು ಅಗತ್ಯವಿರುವ ಸವಾಲುಗಳ ಕುರಿತು ಐಐಟಿಯಲ್ಲಿ ಏರ್ಪಡಿಸಿದ್ದ ಕಟ್ಟಡ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೂ ಕಾರ್ಮಿಕರ ಕಲ್ಯಾಣ ಸೌಲಭ್ಯಗಳಿಗೆ 641.26 ಕೋಟಿ ಮೊತ್ತವನ್ನು ವಿನಿಯೋಗಿಸಲಾಗಿದ್ದು, ಕಾರ್ಮಿಕ ಇಲಾಖೆಯ ಕಾಯ್ದೆಯಡಿ ಒಳಪಡುವ ಎಲ್ಲ ಕಟ್ಟಡ ಮತ್ತು ಇತರೆ ಕಾಮಗಾರಿಗಳ ನೊಂದಣಿ ಪ್ರಮಾಣಪತ್ರವನ್ನು ವಿತರಿಸುವ ಜವಾಬ್ದಾರಿಯನ್ನು ಸ್ವತಃ ಕಾರ್ಮಿಕ ಇಲಾಖೆಯೆ ವಹಿಸಿಕೊಂಡಿದ್ದು, ಇದುವರೆಗೂ 4718 ಸಂಸ್ಥೆಗಳನ್ನು ನೊಂದಾಯಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.  

ಕಾರ್ಮಿಕ ಇಲಾಖೆಯಿಂದ ಇದುವರೆಗೂ 8,500 ಕೋಟಿಗೂ ಅಧಿಕ ಸೆಸ್ ಹಣ ಸಂಗ್ರಹಿಸಲಾಗಿದ್ದು, ಒಟ್ಟು 21.62 ಲಕ್ಷ ಕಟ್ಟಡ ಕಾರ್ಮಿಕರನ್ನು ನೊಂದಾಯಿಸಿಕೊಳ್ಳಲಾಗಿದೆ ಹಾಗೂ  4.57 ಲಕ್ಷ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗದವರನ್ನು ವಿವಿಧ ಕ್ಷೇತ್ರಗಳಲ್ಲಿ ಫಲಾನುಭವಿಗಳೆಂದು ಗುರುತಿಸಲಾಗಿದೆ. ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಸಂಬಂಧಿಸಿದಂತೆ 4389 ಪರಿವೀಕ್ಷಣೆಗಳನ್ನು ಕೈಗೊಂಡು 97 ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು,72 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ದಂಡ ವಿಧಿಸಲಾಗಿದೆ. ಕಾರ್ಖಾನೆಗಳು, ಬಾಯ್ಲರಗಳು, ಕೈಗಾರಿಕಾ ಸುರಕ್ಷತೆ ಮತ್ತು 25 ಕೋಟಿಗಿಂತ ಅಧಿಕ ವೆಚ್ಚದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರ ಸುರಕ್ಷತೆ, ಆರೋಗ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು 2011 ರಲ್ಲಿ ಕಾರ್ಮಿಕ ಇಲಾಖೆಗೆ ನೀಡಿರುವ ಕುರಿತು ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.  

ಕಾರ್ಮಿಕ ಮಂಡಳಿಯ ಬಿಬಿಎಂಪಿ, ಬಿಡಿಎ, ಕೈಗಾರಿಕಾ ಅಭಿವೃದ್ಧಿ ಮಂಡಳಿ, ಮೆಟ್ರೋ, ಬೆಂಗಳೂರು ಮೂಲಭೂತ ಸೌಲಭ್ಯ ನಿರ್ಮಾಣ ಸಂಸ್ಥೆ ಹಾಗೂ ಇತರ ಸಂಸ್ಥೆಗಳು ಸೆಸ್ ಸಂಗ್ರಹಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಆದರೂ ಕಾರ್ಮಿಕ ಸುರಕ್ಷತೆ ಕುರಿತಂತೆ ಉಂಟಾಗಿರುವ ಹಲವು ಲೋಪದೋಷಗಳ ಕುರಿತಂತೆ ಕಾರ್ಮಿಕರಿಂದ, ಸಾರ್ವಜನಿಕರಿಂದ ದೂರು, ಸಲಹೆ ಸೂಚನೆಗಳು ಸಲ್ಲಿಕೆಯಾಗುತ್ತಿದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಅನುಷ್ಠಾನ ಕುರಿತಂತೆ ಸರ್ಕಾರವನ್ನು ಒತ್ತಾಯಿಸಿದ್ದು, ಈ ಕುರಿತಂತೆ ಸಚಿವರಿಗೆ ಮಾಹಿತಿ ನೀಡಲಾಯಿತು.  

ಇಲಾಖೆಯ ಅಧಿಕಾರಿಗಳುಇದುವರೆಗೂ 1254 ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ಪರಿವೀಕ್ಷಣೆ ಕೈಗೊಂಡು ಸುರಕ್ಷತೆ ಮತ್ತು ಆರೋಗ್ಯ ಕುರಿತು ಸೂಚನೆಗಳನ್ನು ನೀಡಿರುವುದು ಮತ್ತು ನಿಯಮ ಅನುಸರಿಸದೆ ನಡೆದಿರುವ ಅಪಘಾತ ಪ್ರಕರಣಗಳಲ್ಲಿ ಗುತ್ತಿಗೆದಾರರ ವಿರುದ್ಧ ನ್ಯಾಯಾಲಯಗಳಲ್ಲಿ 75 ಮೊಕದ್ದಮೆಗಳನ್ನು ಹೂಡಿ 25 ಪ್ರಕರಣಗಳಲ್ಲಿ ದಂಡ ವಿಧಿಸಿರುವ ಕುರಿತು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಮುಖಂಡರ ಗಮನಕ್ಕೆ ತರಲಾಯಿತು.  

ಕಟ್ಟಡ ಕಾರ್ಮಿಕರ ಜೀವನ ಸುಧಾರಣೆಗಾಗಿ ಕ್ರಮ ಕೈಗೊಳ್ಳುವುದು ಸರಕಾರದ ಹಾಗೂ ಕಾರ್ಮಿಕ ಇಲಾಖೆಗಳ ಅತಿದೊಡ್ಡ ಜವಾಬ್ದಾರಿಯಾಗಿದ್ದು, ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಪರಿಣಾಮಕಾರಿಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಹೆಚ್ಚು ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ ಹಾಗೂ  ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕಾರ್ಮಿಕರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಅಗತ್ಯವಿರುವ ಕೌಶಲ್ಯ ತರಬೇತಿಗಳನ್ನು ಕಾರ್ಮಿಕರಿಗೆ ನೀಡುವುದು ಅತ್ಯಗತ್ಯ ಎನ್ನುವ ಅಭಿಪ್ರಾಯವನ್ನು ಕಾರ್ಯಾಗಾರದಲ್ಲಿ ಹಲವು ಕಂಪನಿಗಳ ಮಾಲೀಕರು ಮಂಡಿಸಿದರು.  

ಕಟ್ಟಡ ಕಾರ್ಮಿಕರ ಸುರಕ್ಷತೆ ಉತ್ತಮಪಡಿಸಲು ವಿವಿಧ ಇಲಾಖೆಗಳು ಹಾಗೂ ಭಾಗಿದಾರರು ಪರಸ್ಪರ ದತ್ತಾಂಶಗಳನ್ನು ವಿನಿಮಯಮಾಡಿಕೊಳ್ಳುವುದು ಸೇರಿದಂತೆ ಕಾಮಗಾರಿ ಸ್ಥಳಗಳಲ್ಲಿ ಸುರಕ್ಷತೆ ಅರಿವು ಮೂಡಿಸುವುದು ಮತ್ತು ಸುರಕ್ಷತೆ ಮಾನದಂಡಗಳು ಪಾಲನೆಯಾಗುತ್ತಿರುವ ಕುರಿತು ಖಾತ್ರಿಪಡಿಸುವುದು.ಕಾಮಗಾರಿ ಸಂದರ್ಭಗಳಲ್ಲಿ ಅಪಘಾತ ಹಾಗೂ ಕಾರ್ಮಿಕರ ಸಾವು, ನೋವು  ಸಂಭವಿಸದಂತೆ ಎಲ್ಲಾ ಇಲಾಖೆಗಳು ಹಾಗೂ ಭಾಗಿದಾರರು ಸಂಘಟಿತರಾಗಿ ಅನುಷ್ಠಾನ ವ್ಯವಸ್ಥೆ ರೂಪಿಸುವ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಾಯಿತು.  

ಈ ಸಂದರ್ಭದಲ್ಲಿ  ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮಣಿವಣನ್, ಕಾರ್ಮಿಕ ಇಲಾಖೆಯ ನಿರ್ದೇಶಕ ಕೆ.ಶ್ರೀನಿವಾಸ, ನಿರ್ಮಾಣ ಸಂಸ್ಥೆ ಅಧ್ಯಕ್ಷಸುರೇಶ ಹರಿ, ಕಾರ್ಮಿಕ ಸಂಘಟನೆಗಳ ಅಧ್ಯಕ್ಷ ಎನ್.ಪಿ.ಸ್ವಾಮಿ, ಇತರ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.