ಲಕ್ನೋ, ನ.14 : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಉತ್ತರ ಪ್ರದೇಶ ಶಿಯಾ ಕೇಂದ್ರೀಯ ಮಂಡಳಿಯ ಅಧ್ಯಕ್ಷ ವಸೀಮ್ ರಿಝ್ವಿ ಗುರುವಾರ 51,000 ರೂ. ದೇಣಿಗೆ ಪ್ರಕಟಿಸಿದ್ದಾರೆ.
ಇದಕ್ಕೂ ಮೊದಲು ಮಾಜಿ ಐಪಿಎಸ್ ಅಧಿಕಾರಿ ಕುನಾಲ್ ಕಿಶೋರ್ ನೇತೃತ್ವದ ಮಹಾವೀರ್ ಟ್ರಸ್ಟ್ ಆಫ್ ಪಾಟ್ನಾ, ರಾಮಮಂದಿರ ನಿರ್ಮಾಣಕ್ಕೆ 10 ಕೋಟಿ ರೂ. ಘೋಷಿಸಿತ್ತು. ಪ್ರತಿ ವರ್ಷ ತಲಾ 2 ಕೋಟಿ ರೂ.ಕಂತುಗಳಲ್ಲಿ ನೀಡುವುದಾಗಿ ಟ್ರಸ್ಟ್ ತಿಳಿಸಿತ್ತು.
ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ಮಂಡಳಿ ಸಂಪೂರ್ಣ ಬೆಂಬಲ ನೀಡಿದೆ. ಈ ವಿಷಯದಲ್ಲಿ ಸುಪ್ರೀಂಕೋರ್ಟ್ಗೆ ಅಫಿದವಿತ್ ಅನ್ನೂ ಸಲ್ಲಿಸಿದೆ ಎಂದು ರಿಝ್ವಿ ತಿಳಿಸಿದ್ದಾರೆ.
ರಾಮಮಂದಿರದ ಪರ ಸುಪ್ರೀಂಕೋರ್ಟ್ ತೀಪು ನಿರೀಕ್ಷಿತ. ದೀರ್ಘಾವಧಿಯ ಈ ಸಮಸ್ಯೆಗೆ ಇದೊಂದೇ ಏಕೈಕ ಪರಿಹಾರ ಮಾರ್ಗವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
51,000 ರೂ.ಗಳ ದೇಣಿಗೆಯನ್ನು ರಿಝ್ವಿ ಅವರ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ ನೀಡಿದೆ.
"ವಸೀಮ್ ರಿಝ್ವಿ ಫಿಲಮ್ಸ್ ನೀಡಿದ ದೇಣಿಗೆಯನ್ನು ರಾಮ ಜನ್ಮ ಭೂಮಿ ನ್ಯಾಸ್ನ ಮಹಾಂತ್ ರಾಕೇಶ್ ದಾಸ್ ಅವರಿಗೆ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಸದಸ್ಯ ಅಶ್ಫಾಕ್ ಹುಸೇನ್ 'ಜಿಯಾ' ಹಸ್ತಾಂತರಿಸಲಿದ್ದಾರೆ ಎಂದು ಅವರು ಹೇಳಿದರು.
ಮಸೀದಿ ನಿರ್ಮಾಣಕ್ಕೂ ತಾವು ನಗದು ದೇಣಿಗೆ ನೀಡುವುದಾಗಿ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಅಧ್ಯಕ್ಷ ತಿಳಿಸಿದ್ದಾರೆ.