ಮುಂಬೈ, ಮೇ 8,ರೈಲು ದುರಂತದಲ್ಲಿ ಮೃತಪಟ್ಟ ದುರ್ದೈವಿ ಕಾರ್ಮಿಕರ ಕುಟುಂಬಗಳಿಗೆ ಮಹಾರಾಷ್ಟ್ರ, ಮಧ್ಯಪ್ರದೇಶದ ಸರ್ಕಾರಗಳು ತಲಾ 5 ಲಕ್ಷ ರೂ.ಪರಿಹಾರ ಘೋಷಿಸಿವೆ. ಮಹಾರಾಷ್ಟ್ರದ ಔರಂಗಬಾದ್ ಬಳಿ ರೈಲ್ವೆ ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ 17 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತಂತೆ ಆಘಾತ ವ್ಯಕ್ತಪಡಿಸಿರುವ ಸಿಎಂ ಉದ್ಧವ್ ಠಾಕ್ರೆ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.ಮಧ್ಯಪ್ರದೇಶದ ವಲಸೆ ಕಾರ್ಮಿಕರು ನಡೆದುಕೊಂಡೇ ತಮ್ಮ ಊರು ತಲುಪಲು ನಿರ್ಧರಿಸಿ ರೈಲು ಹಳಿ ಮೇಲೆ ಸಾಗುತ್ತಿದ್ದರು. ನಡೆದು ನಡೆದು ಸುಸ್ತಾಗಿದ್ದ ಪರಿಣಾಮ ಕಳೆದ ರಾತ್ರಿ ರೈಲು ಹಳಿಯ ಮೇಲೆ ಮಲಗಿದ್ದರು. ಇಂದು ಮುಂಜಾನೆ ಔರಂಗಬಾದ್ ಗೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿ ಮೇಲೆ ಮಲಗಿದ್ದವರ ಮೇಲೆ ಹರಿದು 17 ಮಂದಿ ಬಲಿಯಾಗಿದ್ದಾರೆ. ಇದೇ ವೇಳೆ, ಘನಟೆಯಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಕೂಡ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ.