ನೆರೆ ವೇಳೆ ಭಾಗಶಃ ಹಾನಿಗೀಡಾದ ಮನೆಗಳ 5 ಲಕ್ಷ ಪರಿಹಾರ ಮೊತ್ತ ಕಡಿತಗೊಳಿಸಲು ಸರ್ಕಾರ ಚಿಂತನೆ?
house damege
ಬೆಂಗಳೂರು,ಜ 16: ನೆರೆಗೆ ಸಂಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿತ್ತು. ಇದೀಗ ಭಾಗಶಃ ಹಾನಿಗೊಳಗಾದ ಮನೆಗಳಿಗೆ ನೀಡುವ ಮೊತ್ತವನ್ನು ಪರಿಷ್ಕರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಕರ್ನಾಟಕದಲ್ಲಿ ಸುರಿದ ಮಹಾಮಳೆಗೆ ಲಕ್ಷಾಂತರ ಮನೆಗಳು ಹಾನಿಗೊಳಗಾಗಿವೆ. ಮಹಾ ಮಳೆಯ ಆರ್ಭಟಕ್ಕೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಪ್ರವಾಹಕ್ಕೆ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸಿಎಂ ಯಡಿಯೂರಪ್ಪ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಈ ಪೈಕಿ 75ಶೇ. ಗಿಂತ ಹೆಚ್ಚಿಗೆ ಮನೆ ಹಾನಿಯಾದವರಿಗೆ (ಎ ಕೆಟಗರಿ) 5 ಲಕ್ಷ ರೂ. ಪರಿಹಾರ ಘೋಷಿಸಿದ್ದ ಸರ್ಕಾರ ಬಳಿಕ 25-75ಶೇ. ಮನೆ ಹಾನಿಯಾದವರಿಗೂ (ಬಿ ಕೆಟಗರಿ) ಐದು ಲಕ್ಷ ನೀಡಲು ನಿರ್ಧರಿಸಿತ್ತು. ಆದರೆ ಇದೀಗ ಭಾಗಶಃ ಮನೆ ಹಾನಿಯಾದವರ ಪರಿಹಾರ ಮೊತ್ತವನ್ನು ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆಗೆ ಭಾಗಶಃ ಹಾನಿಗೀಡಾದ ಮನೆಗಳಿಗೆ ಸಿಎಂ ಯಡಿಯೂರಪ್ಪರ ಭರವಸೆಯಂತೆ 5 ಲಕ್ಷ ರೂ. ಪರಿಹಾರ ನೀಡಲು ಅಧಿಕಾರಿಗಳು ತಾಂತ್ರಿಕ ಸಂಕೀರ್ಣತೆಯನ್ನು ಎದುರಿಸುತ್ತಿದ್ದಾರೆ.
ಮೊದಲಿಗೆ ಭಾಗಶಃ ಹಾನಿಗೀಡಾದ ಅಂದರೆ ಬಿ ಕೆಟಗರಿ ಮನೆಗಳಿಗೆ ಒಂದು ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ಸಿ ಕೆಟಗರಿ ಅಂದರೆ 15-25ಶೇ. ಹಾನಿಗೀಡಾದ ಮನೆಗಳಿಗೆ 25,000 ರೂ. ಪರಿಹಾರ ಕೊಡಲು ನಿರ್ಧರಿಸಲಾಗಿದೆ. ಬಳಿಕ ಅಧಿವೇಶನದ ವೇಳೆ ಎ ಮತ್ತು ಬಿ ಕೆಟಗರಿ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದರು.
ಆದರೆ, ವಾಸ್ತವದಲ್ಲಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ಪರಿಹಾರ ನೀಡುವುದು ಕಷ್ಟ ಸಾಧ್ಯವಾಗುತ್ತಿದೆ. ಭಾಗಶಃ ಹಾನಿಯಾದ ಮನೆಗಳಲ್ಲಿ ಗೋಡೆ ಅಥವಾ ಮನೆಯ ಒಂದು ಭಾಗವಷ್ಟೆ ಕುಸಿದಿದ್ದು, ಇಂಥ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ.
ಸಂಪೂರ್ಣ ಹಾನಿಗೊಳಗಾದ ಎ ಕೆಟಗರಿ ಮನೆಗಳಿಗೆ ಹಂತ ಹಂತವಾಗಿ ಪರಿಹಾರ ವಿತರಿಸಲಾಗುತ್ತಿದೆ. ಮೊದಲ 1 ಲಕ್ಷ ರೂ. ಕಂತನ್ನು ಮನೆ ಫೌಂಡೇಶನ್ ಕಟ್ಟುವಾಗ ನೀಡಲಾಗುತ್ತದೆ. ಉಳಿದಂತೆ ಇತರ ಕಂತುಗಳನ್ನು ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. ಪ್ರತಿ ನಿರ್ಮಾಣ ಹಂತಗಳ ಫೋಟೋವನ್ನು ಸಲ್ಲಿಸಿದ ಬಳಿಕ ಮುಂದಿನ ಕಂತನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಭಾಗಶಃ ಹಾನಿಗೊಳಗಾದ ಬಿ ಕೆಟಗರಿ ಮನೆಗಳಿಗೆ ಈ ರೀತಿಯ ಪ್ರಕ್ರಿಯೆ ಅನುಸರಿಸುವುದು ಅಸಾಧ್ಯವಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಹೀಗಾಗಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 3 ಲಕ್ಷ ರೂ. ಪರಿಹಾರ ನೀಡುವುದು ಒಳಿತು ಎಂಬುದು ಅಧಿಕಾರಿಗಳ ಸಲಹೆಯಾಗಿದೆ. 25-50ಶೇ. ಹಾನಿಗೀಡಾದ ಮನೆಗಳಿಗೆ 1.50 ಲಕ್ಷ ರೂ., 50-75ಶೇ. ಹಾನಿಗೀಡಾದ ಮನೆಗಳಿಗೆ 3 ಲಕ್ಷ ರೂ. ಪರಿಹಾರ ನೀಡಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಸಂಬಂಧ ಸರ್ಕಾರ ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರಲಿದೆ ಎಂದು ಹೇಳಲಾಗಿದೆ.
ನೆರೆಗೆ ಹಾನಿಗೀಡಾದ ಮನೆಗಳ ವಿವರ:
ಎ ಕೆಟಗರಿ ಮನೆ- 7,835
ಬಿ ಕೆಟಗರಿ ಮನೆ- 25,125
ಸಿ ಕೆಟಗರಿ ಮನೆ- 82,205
ಒಟ್ಟು ಮನೆ ಹಾನಿ- 1,17,165
ಡಿಸಿ ಅನುಮೋದಿತ ಮನೆ- 1,16,544
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 