ಬೆಂಗಳೂರು, ಮಾ.20,ಬಿಪಿಎಲ್ ಪಡಿತರದಾರರಿಗೆ ಈಗಾಗಲೇ ಸರ್ಕಾರ 5 ಕೆ.ಜಿ.ಅಕ್ಕಿ ಹಾಗೂ 2 ಕೆ.ಜಿ.ಗೋದಿ ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ತೊಗರಿ ಬೇಳೆ ಕೊಡುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಗೋಪಾಲಯ್ಯ ವಿಧಾನಸಭೆಗೆ ಇಂದಿಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎ.ಟಿ.ರಾಮಸ್ವಾಮಿ, ಈ ಹಿಂದೆ ರಾಜ್ಯದ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಅಕ್ಕಿ ಜೊತೆ ಒಂದು ಲೀಟರ್ ತಾಳೆಎಣ್ಣೆ, ಒಂದು ಕೆ.ಜಿ. ತೊಗರಿ, ಉಪ್ಪು, ಸಕ್ಕರೆ ನೀಡಲಾಗುತ್ತಿತ್ತು. ಇದರಿಂದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಬಹಳ ಸಹಾಯವಾಗುತ್ತಿತ್ತು. ಅದರೊಂದಿಗೆ ಅವರಿಗೆ ಪೌಷ್ಟಿಕ ಆಹಾರವೂ ದೊರಕುವಂತಾಗಿತ್ತು. ಮಾತ್ರವಲ್ಲ ಇದರಿಂದ ಅವುಗಳನ್ನು ಬೆಳೆಯುವ ರೈತರಿಗೂ ಅನುಕೂಲವಾಗುತ್ತಿತ್ತು. ಆದರೆ ಅದನ್ನು ನಿಲ್ಲಿಸಿರುವುದು ಸರಿಯಲ್ಲ. ಮುಂದುವರಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಅದಕ್ಕೆ ಉತ್ತರಿಸಿದ ಸಚಿವರು, ಸೆಪ್ಟಂಬರ್ 2016ರಿಂದ 25 ರೂ.ದರದಲ್ಲಿ ಒಂದು ಲೀಟರ್ ತಾಳೆಎಣ್ಣೆ, ಅಕ್ಟೋಬರ್ 2016ರಿಂದ 2 ರೂ. ದರದಲ್ಲಿ ಒಂದು ಕೆ.ಜಿ.ಉಪ್ಪು, 2017, ಮಾರ್ಚ್ ತಿಂಗಳಿಂದ 15 ರೂ.ದರಲ್ಲಿ ಒಂದು ಕೆ.ಜಿ. ಸಕ್ಕರೆಯನ್ನು ಮೂರು ವರ್ಷಗಳ ಕಾಲ ವಿತರಿಸಲಾಗಿತ್ತು. 2017, ಮೇ ತಿಂಗಳಲ್ಲಿ ಈ ಕಾರ್ಯಕ್ರಮವನ್ನು ಸರ್ಕಾರ ರದ್ದು ಮಾಡಿದೆ. 2017 ಏಪ್ರಿಲ್ ತಿಂಗಳಿಂದ ಒಂದು ಕೆಜಿ. ತೊಗರಿಬೇಳೆಯನ್ನು ಸೆಪ್ಟಂಬರ್ ವರೆಗೆ ವಿತರಣೆ ಮಾಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅಂತ್ಯೋದಯ ಕಾರ್ಡ್‌ದಾರರಿಗೆ 35ಕೆ.ಜಿ ಅಕ್ಕಿಯನ್ನು, ಬಿಪಿಎಲ್ ಕಾರ್ಡ್ ಹೊಂದಿದವರಿಗೆ 7 ಕೆ.ಜಿ. ಅಕ್ಕಿಯನ್ನು ಈ ತಿಂಗಳವರೆಗೆ ಮುಂದವರಿಸಿಕೊಂಡು ಬರುತ್ತಿದೆ. ತಾಳೆಎಣ್ಣೆ, ಉಪ್ಪು, ಸಕ್ಕರೆಯನ್ನು 2017, ಮೇ ತಿಂಗಳಲ್ಲೇ ರದ್ದುಪಡಿಸಲಾಗಿದೆ. ಇನ್ನು ಮುಂದೆ ಐದು ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ.ಗೋದಿ ವಿತರಣೆ ಮಾಡಲಾಗುವುದು. ತಾಳೆ ಎಣ್ಣೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.