ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 5,683.50 ಕೋಟಿ ರೂ. ಹೂಡಿಕೆ ಮಾಡಲಿರುವ ಎಡಿಐಎ

ಮುಂಬಯಿ, ಜೂನ್ 8, ಅಬುಧಾಬಿ ಇನ್‌ವೆಸ್ಟ್‌ಮೆಂಟ್ ಅಥಾರಿಟಿಯ (“ಎಡಿಐಎ”) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಿಂದ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 5,683.50 ಕೋಟಿ ರೂ.ಗಳ ಹೂಡಿಕೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಘೋಷಿಸಿವೆ. ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಎಡಿಐಎ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ.1.16ರಷ್ಟು ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಈ ಹೂಡಿಕೆಯೊಂದಿಗೆ, ಏಳು ವಾರಗಳಿಗೂ ಕಡಿಮೆ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ ಹಾಗೂ ಎಡಿಐಎ ಸೇರಿದಂತೆ ಪ್ರಮುಖ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 97,885.65 ಕೋಟಿ ರೂ. ಹೂಡಿಕೆ ಪಡೆದುಕೊಂಡಂತಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ. ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.

 1976ರಲ್ಲಿ ಸ್ಥಾಪನೆಯಾದ ಎಡಿಐಎ ಜಾಗತಿಕ ಮಟ್ಟದಲ್ಲಿ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಯಾಗಿದ್ದು, ದೀರ್ಘಾವಧಿಯ ಮೌಲ್ಯ ಸೃಷ್ಟಿಯ ಮೇಲೆ ಕೇಂದ್ರೀಕೃತವಾದ ಕಾರ್ಯತಂತ್ರದ ಮೂಲಕ ಅಬುಧಾಬಿ ಸರ್ಕಾರದ ಪರವಾಗಿ ವಿವೇಕಯುತ ಹೂಡಿಕೆಗಳನ್ನು ಮಾಡುತ್ತದೆ. ಎರಡು ಡಜನ್‌ಗಿಂತಲೂ ಹೆಚ್ಚಿನ ಆಸ್ತಿ ವರ್ಗಗಳು ಮತ್ತು ಉಪ-ವರ್ಗಗಳಲ್ಲಿ ವಿವಿಧ ಉದ್ಯಮಗಳಾದ್ಯಂತ ವ್ಯಾಪಿಸಿರುವ ಜಾಗತಿಕ ಹೂಡಿಕೆಗಳ ಪೋರ್ಟ್‌ಫೋಲಿಯೋ ಅನ್ನು ಎಡಿಐಎ ನಿರ್ವಹಿಸುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, "ವಿಶ್ವದಾದ್ಯಂತ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ದೀರ್ಘಕಾಲೀನ ಮೌಲ್ಯದ ಹೂಡಿಕೆಯ ಯಶಸ್ವಿ ದಾಖಲೆಯಿರುವ ಎಡಿಐಎ, ಭಾರತವನ್ನು ಡಿಜಿಟಲ್ ನಾಯಕತ್ವಕ್ಕೆ ಕೊಂಡೊಯ್ಯುವ ಮತ್ತು ಸಮಗ್ರ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವ ಧ್ಯೇಯದಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನೊಂದಿಗೆ ಜೊತೆಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಈ ಹೂಡಿಕೆಯು ನಮ್ಮ ಕಾರ್ಯತಂತ್ರ ಮತ್ತು ಭಾರತದ ಸಾಮರ್ಥ್ಯದ ಬಲವಾದ ಅನುಮೋದನೆಯಾಗಿದೆ." ಎಂದು ಹೇಳಿದ್ದಾರೆ.

ಎಡಿಐಎಯ ಪ್ರೈವೇಟ್ ಇಕ್ವಿಟೀಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಹಮದ್ ಶಹವಾನ್ ಅಲ್‌ಧಾಹೇರಿ, "ಪ್ರಮುಖ ಸಾಮಾಜಿಕ-ಆರ್ಥಿಕ ಬೆಳವಣಿಗೆಗಳು ಹಾಗೂ ಜನರು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನದ ಮೇಲೆ ತಂತ್ರಜ್ಞಾನದ ಪರಿವರ್ತಕ ಪರಿಣಾಮಗಳ ಪ್ರಯೋಜನ ಪಡೆಯಲು ಸಿದ್ಧವಾಗಿರುವ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದ ಡಿಜಿಟಲ್ ಕ್ರಾಂತಿಯ ಮುಂಚೂಣಿಯಲ್ಲಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಮಾರುಕಟ್ಟೆಯ ನಾಯಕತ್ವ ಪಡೆದುಕೊಂಡಿರುವ ವ್ಯವಹಾರದ ಕ್ಷಿಪ್ರ ಬೆಳವಣಿಗೆಗೆ, ತಂತ್ರಕುಶಲತೆಯಿಂದ ಕಾರ್ಯಗತಗೊಳಿಸುವ ಸದೃಢ ಹಿನ್ನೆಲೆಯು ಬುನಾದಿಯಾಗಿದೆ. ಜಿಯೋದಲ್ಲಿನ ನಮ್ಮ ಹೂಡಿಕೆಯು, ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಮತ್ತು ಸಾಬೀತಾಗಿರುವ ಪಾಲುದಾರರೊಂದಿಗೆ ಜಾಗತಿಕವಾಗಿ ಹೂಡಿಕೆ ಮಾಡಲು ಆಳವಾದ ಪ್ರಾದೇಶಿಕ ಮತ್ತು ವಲಯದ ಪರಿಣತಿಯನ್ನು ಬಳಸಿಕೊಳ್ಳುವ ಎಡಿಐಎ ಸಾಮರ್ಥ್ಯ ಪ್ರದರ್ಶನದ ವಿಸ್ತರಣೆಯಾಗಿದೆ.” ಎಂದು ಹೇಳಿದ್ದಾರೆ.ಈ ವಹಿವಾಟು, ನಿಯಂತ್ರಕರ ಹಾಗೂ ಮತ್ತಿತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಆಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್‌ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.