ಹಾಸ್ಟೆಲ್‌ಗಳಲ್ಲಿ ಯಾವುದೇ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರವಹಿಸಿ: ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ
ಕಾರವಾರ 16: ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನಾನುಕೂಲತೆಯಾಗದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ವಾರ್ಡನ್‌ಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಎಲ್ಲಾ ಹಾಸ್ಟೆಲ್‌ಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಸತಿ ನಿಲಯಗಳ ವಾರ್ಡನ್ ಮತ್ತು ಮೇಲ್ವಿಚಾರಕರು, ವಸತಿ ಶಾಲೆಗಳ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ರಕ್ಷಣೆ, ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು, ಅವರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಮುನ್ನೆಚರಿಕೆ ವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ಧಿ ಅಗತ್ಯವಿರುವ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಜಿಲ್ಲೆಯ ಹಾಸ್ಟೆಲ್‌ಗಳಲ್ಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗುವಂತೆ ಅವರ ವಿದ್ಯಾಭ್ಯಾಸದ ಕುರಿತು ವಾರ್ಡನ್‌ಗಳು ವಿಶೇಷ ಕಾಳಜಿ ವಹಿಸಬೇಕು. ಅವರ ಕಲಿಕೆಗೆ ಅಗತ್ಯವಿರುವ ಪುಸ್ತಕಗಳು ಮತ್ತು ಕಂಪ್ಯೂಟರ್ ವ್ಯವಸ್ಥೆಯನ್ನು ಒದಗಿಸಬೇಕು. ಯಾವುದೇ ವಿದ್ಯಾರ್ಥಿ ಕನಿಷ್ಠ ಶೇ.60 ಕ್ಕಿಂತ ಕಡಿಮೆ ಅಂಕ ಪಡೆಯದಂತೆ ನೋಡಿಕೊಳ್ಳಬೇಕು. ಹಾಸ್ಟೆಲ್‌ನ ಲೈಬ್ರರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತಹ ಪುಸ್ತಕಗಳನ್ನು ಒದಗಿಸುವುದರ ಜೊತೆಗೆ ಉನ್ನತ ಸಾಧನೆಗಳನ್ನು ಮಾಡುವ ಕುರಿತು ಅವರಿಗೆ ಸದಾ ಪ್ರೆರೇಪಿಸಿ, ಅವರಲ್ಲಿ ಧನಾತ್ಮಕ ಚಿಂತನೆಗಳು ರೂಪುಗೊಳ್ಳುವಂತೆ ನೋಡಿಕೊಳ್ಳಿ ಎಂದರು.
ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಒದಗಿರುವ ಸುರಕ್ಷತೆ ಕುರಿತ ಸೇಫ್ಟಿ ಆಡಿಟ್ ನಡೆಸಿ, ಅಲ್ಲಿ ಕಂಡು ಬರುವ ಕೊರತೆಗಳು ಕುರಿತಂತೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಆದ್ಯತೆಯ ಮೇಲೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಹಾಸ್ಟೆಲ್‌ಗಳಲ್ಲಿನ ಅಸುರಕ್ಷತೆಯ ಕಾರಣದಿಂದ ಯಾವುದೇ ಅವಘಡಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಮತ್ತು ಆರೋಗ್ಯದ ಕುರಿತಂತೆ ವಾರ್ಡನ್ ಗಳು ತಮ್ಮ ಮನೆಯ ಮಕ್ಕಳಂತೆ ಕಾಳಜಿ ವಹಿಸಬೇಕು.ಅವರೊಂದಿಗೆ ಮುಕ್ತವಾಗಿ ಬೆರೆತು, ಅವರಲ್ಲಿರುವ ಕೊರತೆಗಳು ಮತ್ತು ಸಮಸ್ಯೆಗಳನ್ನು ಬಗ್ಗೆ ತಿಳಿದು ಅವುಗಳ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಮಾತನಾಡಿ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳಲ್ಲಿ ನಿರ್ಲಕ್ಷ್ಯತನ ವಹಿಸಬಾರದು, ಕಲುಷಿತ ನೀರು ಸರಬರಾಜು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿರಂತರವಾಗಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಬೇಕು. ಕಲಿಕೆಯ ಜೊತೆಗೆ ಅವರಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೆರೇಪಿಸಬೇಕು. ಎಲ್ಲಾ ಹಾಸ್ಟೆಲ್‌ಗಳಲ್ಲಿ ಪ್ರತಿ ತಿಂಗಳು ಪ್ರಚಲಿತ ಮತ್ತು ಗಮನಾರ್ಹ ವಿಷಯಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಪ್ರಬಂದ, ಭಾಷಣ ಸ್ಪರ್ಧೇಗಳನ್ನು ಆಯೋಜಿಸಿ ಅವರ ಸಮಗ್ರ ಮನೋವಿಕಾಸಕ್ಕೆ ಒತ್ತು ನೀಡಬೇಕು ಎಂದರು.
ಹಾಸ್ಟೆಲ್‌ಗಳಲ್ಲಿನ ಗ್ರಂಥಾಲಯ ಮತ್ತು ಕಂಪ್ಯೂಟರ್ ಕೊಠಡಿಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿರಬೇಕು, ಇವುಗಳ ಸಂಪೂರ್ಣ ಪ್ರಯೋಜನ ಎಲ್ಲಾ ವಿದ್ಯಾರ್ಥಿಗಳಿಗೆ ದೊರೆಯಬೇಕು, ವಾರ್ಡನ್‌ಗಳು ಅವರಲ್ಲಿ ಓದುವ ಪ್ರವೃತ್ತಿ ಮತ್ತು ಹೊಸ ವಿಚಾರಗಳನ್ನು ತಿಳಿದುಕೊಳ್ಳುವಂತೆ ಆಸಕ್ತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಸತೀಶ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಬ್ದಲ್ ರಶೀದ್ ಹಾಗೂ ಜಿಲ್ಲೆಯ ಎಲ್ಲಾ ಹಾಸ್ಟೆಲ್‌ಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಸತಿ ನಿಲಯಗಳ ವಾರ್ಡನ್ ಮತ್ತು ಮೇಲ್ವಿಚಾರಕರು, ವಸತಿ ಶಾಲೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.