ಬೆಳಗಾವಿ, ಆ 11 ರಾಜ್ಯದ 17 ಜಿಲ್ಲೆಗಳಲ್ಲಿ ಕಂಡುಬಂದಿರುವ ಪ್ರವಾಹ ಹಾಗೂ ಅತಿವೃಷ್ಟಿಯಲ್ಲಿ 34 ಜನರು ಮೃತಪಟ್ಟಿದ್ದು 3 ಲಕ್ಷಕ್ಕೂ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ತುರ್ತ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಅವರು ರಾಜ್ಯದಲ್ಲಿ ಮಳೆಯ ವಿವರ ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟದ ಕುರಿತು ಮಾಹಿತಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಿದರು.
ರಾಜ್ಯದಲ್ಲಿ ಕೆಲವೆಡೆ ಮಳೆ ಹಾಗೂ ನೆರೆ ಪ್ರಮಾಣ ಇಳಿಮುಖವಾಗುತ್ತದ್ದು ರವಿವಾರ ಮಧ್ಯಾಹ್ನದ ವೇಳೆಗೆ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ನಾಳೆ ಹಳದಿ ಅಲರ್ಟ್ ಇರಲಿದೆ.ಇಂದು ಸಹಜ ದಿನಗಳಲ್ಲಿ ಪ್ರವಾಹ ಹಾಗೂ ಮಳೆ ಸಹಜ ಸ್ಥಿತಿಯಲ್ಲಿದ್ದು, ನಾಳೆ ಇಡೀ ರಾಜ್ಯದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲಿದೆ ಮತ್ತಷ್ಟು ಸುಧಾರಣೆ ಕಾಣಲಿದೆ ಎಂದು ಮುಖ್ಯ ಕಾರ್ಯದಶರ್ಿಗಳು ತಿಳಿಸಿದರು.
ಬೆಳಗಾವಿ ಸೇರಿದಂತೆ ರಾಜ್ಯದಾದ್ಯಂತ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಕೇಂದ್ರೀಯ ರಕ್ಷಣಾ ಪಡೆ,ರಾಜ್ಯ ವಿಪತ್ತು ರಕ್ಷಣಾ ಪಡೆ, ವಾಯುಸೇನೆ, ಅಗ್ನಿಶಾಮಕ ಇಲಾಖೆ,ಹಾಗೂ ಪೊಲೀಸ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳ ಕಾರ್ಯಾಚರಣೆ ಬಗ್ಗೆ ಸಭೆಗೆ ಅವರು ಮಾಹಿತಿ ನೀಡಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇದುವರೆಗೆ 34 ಜನರು ಮೃತಪಟ್ಟಿದ್ದು, ಪ್ರವಾಹ ಹಾಗೂ ಮಳೆಯಿಂದಾಗಿ ಮರಣ ಹೊಂದಿದವರ ಕುಟುಂಬದವರಿಗೆ 2 ದಿನಗಳಲ್ಲಿಯೇ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಲಾಗುತ್ತಿದೆ.
ಈವರೆಗೆ 3 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ, ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತ ಜನರಿಗೆ ಊಟ, ವಸತಿ ಮತ್ತು ಬಟ್ಟೆಗಳನ್ನು ಒದಗಿಸಲಾಗುತ್ತಿದೆ. ವೈದ್ಯಕೀಯ ಸೌಲಭ್ಯ ಕೂಡ ನೀಡಲಾಗುತ್ತಿದ್ದು, ಇದಲ್ಲದೇ ಜಾನುವಾರುಗಳಿಗೂ ಆಶ್ರಯ ಒದಗಿಸಿದ್ದು, ಮೇವು ವಿತರಣೆ ಮಾಡಲಾಗುತ್ತಿದೆ ಎಂದರು.
ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ತಕ್ಷಣವೇ ಪರಿಹಾರ ಮತ್ತು ಪುನರ್ವಸತಿ ಕಾರ್ಯ ಕೈಗೊಳ್ಳಲು ಈಗಾಗಲೇ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.ಪ್ರಾಥಮಿಕ ಸಮೀಕ್ಷೆ ಪ್ರಕಾರ ಪ್ರವಾಹ ಪೀಡಿತ ವಿವಿಧ ಜಿಲ್ಲೆಗಳಲ್ಲಿ 4.15 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಪ್ರಮುಖ 136 ರಸ್ತೆಗಳ ಸಂಪರ್ಕ ಕಡಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳು ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೀಡಾಗಿವೆ. ಸರ್ಕಾರಿ ಕಟ್ಟಡಗಳು, ರಸ್ತೆ, ಸೇತುವೆ,ಶಾಲೆಗಳು, ಪೈಪ್ ಲೈನ್, ವಿದ್ಯುತ್ ಕಂಬಗಳು, ಸೇರಿದಂತೆ ಮೂಲಭೂತ ಸೌಕರ್ಯಗಳ ಹಾನಿಯ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.