30 ದಿನಗಳ ಉಚಿತ ಬ್ಯೂಟಿಷಿಯನ್ ತರಬೇತಿ ಆರಂಭ

30 Days Free Beautician Training Begins

ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಯುವನಿಧಿಪ್ಲಸ್‌: 

ಧಾರವಾಡ  ಫೆ.04: ರಾಜ್ಯ ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ಯುವನಿಧಿಪ್ಲಸ್ ಅಡಿಯಲ್ಲಿ ಜಿಲ್ಲೆಯ ಪದವಿಧರ ಮಹಿಳೆಯರಿಗಾಗಿ 30 ದಿನಗಳ ಉಚಿತ ಬುಟಿಷಿಯನ್ ತರಬೇತಿಯನ್ನು ಕೋಮಲ್ ಬ್ಯುಟಿ ಅಕ್ಯಾಡಮಿ, ಧಾರವಾಡದಲ್ಲಿ ನಿನ್ನೆ (ಫೆ.03) ಬೆಳಿಗ್ಗೆ ಜ್ಯೋತಿ ಬೆಳಗಿಸುವುದರ ಮುಖಾಂತರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ಎಸ್‌. ಮಲ್ಲಿಕಾರ್ಜುನ ಅವರು ಉದ್ಘಾಟಿಸಿದರು ಹಾಗೂ ಕೌಶಲ್ಯ ತರಬೇತಿಯ ಸಂಪೂರ್ಣ ಲಾಭಪಡೆದು ಜಿಲ್ಲಾ ಕೈಗಾರಿಕಾ ಕೇಂದ್ರದ ಮುಖಾಂತರ ಪಿ.ಎಂ.ಇ.ಜಿ.ಪಿ. ಯೋಜನೆಯಡಿಯಲ್ಲಿ ಸಾಲಸೌಲಭ್ಯ ಹೊಂದಿ ತಮ್ಮ ಬ್ಯುಟಿಷಿಯನ್ ಉದ್ದಿಮೆಯನ್ನು ಬೆಳೆಸಲು ಎಲ್ಲ ರೀತಿಯ ಸಹಾಯ ನೀಡಲಾಗುವುದೆಂದು ತಿಳಿಸಿದರು. 

ಜಿಲ್ಲೆಯ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಎ. ಎನ್‌. ಅವರು ಮಾತನಾಡಿ, ರಾಷ್ಟ್ರ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ಬ್ಯುಟಿಷಿಯನ್ ಕೌಶಲ್ಯಕ್ಕೆ ಇರುವ ಅವಕಾಶ ಬಗ್ಗೆ ಉದಾಹರಣೆಗಳೊಂದಿಗೆ ಅಭ್ಯರ್ಥಿಗಳಿಗೆ ಮನವರಿಕೆ ಮಾಡಿದರು.  

ಕೋಮಲ್ ಬ್ಯುಟಿ ಅಕ್ಯಾಡಮಿಯ ಮಾಲೀಕರಾದ ರಂಜನಾ ಕೃಷ್ಣ ಪೇಟೆ ಅವರು ಪದವಿಧರರಿಗೆ ಬ್ಯುಟಿಷಿಯನ್ ತರಬೇತಿ ನೀಡುವ ಜವಾಬ್ದಾರಿ ಹೊಂದಿದ್ದು, ಶಿಬಿರಾರ್ಥಿಗಳಿಗೆ ಸ್ಕಿನ್ ಕೇರ್, ಹೇರ್ ಕೇರ್, ನೇಲ್ ಆರ್ಟ್‌ ಹಾಗೂ ಮೆಕಪ್ ವಿಷಯಗಳಲ್ಲಿ ಸುಧೀರ್ಘವಾಗಿ ಪ್ರಾಯೋಗಿಕ ತರಬೇತಿಯನ್ನು ವ್ಯವಸ್ಥಿತವಾಗಿ ನೀಡುವುದರ ಬಗ್ಗೆ ಶಿಭಿರಾರ್ಥಿಗಳಿಗೆ ಭರವಸೆಯನ್ನು ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಡಾಕ್‌ನ ಜಂಟಿ ನಿರ್ದೇಶಕ ಚಂದ್ರಶೇಖರ ಹೆಚ್‌. ಅಂಗಡಿ ಅವರು ಮಾತನಾಡಿ, ಒಂದು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಬ್ಯುಟಿಷಿಯನ್ ತರಬೇತಿ ಹೊಂದಲು ಹಾಗೂ ಸರ್ಕಾರದ ಹಣಕಾಸು ಹಾಗೂ ಇತರೆ ಸೌವಲತ್ತುಗಳನ್ನು ಪಡೆಯಲು ಶಿಭಿರಾರ್ಥಿಗಳಿಗೆ ಬೆಂಬಲ ಸೇವೆ ನೀಡಲಾಗುವುದೆಂದು ತಿಳಿಸಿದರು. ತರಬೇತಿಯಲ್ಲಿ ಜಿಲ್ಲೆಯ ಒಟ್ಟು 30 ಮಹಿಳಾ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಸಿಡಾಕ್‌ನ ತರಬೇತಿದಾರರಾದ ರೋಹಿಣಿ ಘಂಟಿ ಅವರು ಕಾರ್ಯಕ್ರಮ ನಿರೂಪಿಸಿದರು.