ವಿದುಷಿ ದಿವ್ಯಾ ನಾಯ್ಕ ಅವರಿಂದ ಸತತ 3 ತಾಸು ಭಾರತನಾಟ್ಯ ಪ್ರದರ್ಶನ

3-hour Bharatanatyam performance by Vidushi Divya Nayak

ಲೋಕದರ್ಶನ ವರದಿ 

ವಿದುಷಿ ದಿವ್ಯಾ ನಾಯ್ಕ  ಅವರಿಂದ ಸತತ 3 ತಾಸು ಭಾರತನಾಟ್ಯ ಪ್ರದರ್ಶನ  

 ಹಾವೇರಿ 14: ವಿದುಷಿ ದಿವ್ಯಾ ನಾಯ್ಕ ಬಹುಮುಖ ಪ್ರತಿಯಾಗಿದ್ದಾಳೆ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದಿವ್ಯಾ ಅವರ  ಹೆಜ್ಜೆ ಹಾಗೂ ಗೆಜ್ಜೆನಾದ  ಕೇಳಿಸುವಂತಾಗಲಿ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎನ್‌.ಆರ್‌.ಬಿರಸಾಲ ಅವರು  ಶುಭ ಹಾರೈಸಿದರು.  

ಹಾವೇರಿ ನಗರದ ಗೆಳೆಯರ ಬಳಗ ಪ್ರಾಥಮಿಕ ಶಾಲೆ ಕಲಾಭವನದಲ್ಲಿ  ರವಿವಾರ ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿಂದ ಜರುಗಿದ ವಿದುಷಿ ದಿವ್ಯಾ ನಾಯ್ಕ ಭಾರತನಾಟ್ಯ ರಂಗಪ್ರವೇಶ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ದಿವ್ಯಾ ಅವರು ಎಂ.ಎಸ್ಸಿ ಬಿ.ಇಡಿ ವಿದ್ಯಾರ್ಹತೆ ಹೊಂದಿದ್ದು, ಅವರು ತಮ್ಮ ಓದಿನ ಜೊತೆಗೆ, ಬ್ಯಾಡ್ಮಿಂಟ್ ಕ್ರೀಡೆ ಹಾಗೂ ನೃತ್ಯ ಕಲೆಯಲ್ಲಿಯೂ ಸಾಧನೆ ಮಾಡಿರುವುದು ಅತ್ಯಂತ ಸಂತಸದ ಸಂಗತಿ. ನೃತ್ಯ ಕಲೆಯಲ್ಲಿ ಸಾಧನೆ ಮಾಡಲು ಅವಳನ್ನು ಪ್ರೋತ್ಸಾಹಿಸಿದ ಅವರ ಪಾಲಕರನ್ನು ಆಭಿನಂದಿಸುತ್ತೇನೆ ಎಂದರು ಹೇಳಿದರು.  

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ,  ಸಾಹಿತ್ಯ, ಸಂಗೀತ, ನೃತ್ಯ ಕಲೆ   ನೋಡುಗರ ಮನಸ್ಸಿಗೆ ಮುದ ನೀಡುತ್ತದೆ.  ಆದರೆ ಇಂದು ದೂರದರ್ಶನ ಹಾಗೂ ಸಿಮಾನಗಳು ಮನಸ್ಸನ್ನು ವಿರೂಪಗೊಳಿಸುತ್ತವೆ. ಹಾಗಾಗಿ  ಪಾಲಕರು ಮಕ್ಕಳಿಗೆ ನಮ್ಮ ಸಂಸ್ಕೃತಿ, ನೃತ್ಯ  ಹಾಗೂ ಸಂಗೀತ ಕಲೆಗಳನ್ನು   ತಿಳಿಸುವ ಜೊತೆಗೆ ಅವುಗಳನ್ನು ಕಲಿಯಲು ಪ್ರೋತ್ಸಾಹ ನೀಡಬೇಕು ಎಂದರು.  

ದಿವ್ಯಾ ಉತ್ತಮ ನೃತ್ಯಗಾರ್ತಿಯಾಗಿದ್ದು,  ಭರತನಾಟ್ಯ ಕ್ಷೇತ್ರದಲ್ಲಿ ಎತ್ತರಎತ್ತರವಾಗಲಿ ಬೆಳೆಲಿ, ಒಳ್ಳೆಯ ಗುರುವಾಗಿ ಭರತನಾಟ್ಯ ಕ್ಷೇತ್ರದಲ್ಲಿ ಹೆಸರು ಮಾಡದಲಿ ಎಂದು ಹಾರೈಸಿದರು. 

ಹುಬ್ಬಳ್ಳಿ ವಿಜಯಕರ್ನಾಟಕ ಮುಖ್ಯ ವರದಿಗಾರ ವಿಜಯ್ ಹೂಗಾರ ಹಾಗೂ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ವೆಂಕನಗೌಡ ಆರ್‌.ಪಾಟೀಲ ಅವರು ಮಾತನಾಡಿ, ಶಾಸ್ತ್ರೀಯ ನೃತ್ಯ ಕಲೆ  ನಮ್ಮ ಸಂಸ್ಕೃತಿ ಶ್ರೀಮಂತಿಕೆ ಬಿಂಬಿಸುತ್ತದೆ ಹಾಗೂ ದೈಹಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ  ಸಾಂಪ್ರದಾಯಿಕ ಕಲೆಗಳ  ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.  

ಡಾ.ಸಹನಾ ಪ್ರದೀಪ ಭಟ್ಟ ಅವರು ಮಾತನಾಡಿ,  ದಿವ್ಯಾಳ ಸಾಧನೆಗೆ  ಅವಳ ಶ್ರದ್ಧೆ,  ಶಿಸ್ತು ಹಾಗೂ ತಾಳ್ಮೆ ಕಾರಣವಾಗಿದೆ.  ಅವಳು ತನ್ನ ಓದು ಹಾಗೂ ನೃತ್ಯವನ್ನು ಎರಡು ಸರಿಸಮಾನವಾಗಿ ತೆಗೆದುಕೊಂಡು ಹೋಗುವ ಮೂಲಕ  ಓದು ಹಾಗೂ ನೃತ್ಯದಲ್ಲಿಯೂ ಸಾಧನೆ ಮಾಡಿದ್ದಾಳೆ.  ಓದು ಬುದ್ದಿ ಹಾಗೂ ನೃತ್ಯ ಸಂಸ್ಕಾರ  ನೀಡುತ್ತದೆ ಎಂದರು. ಶಿರಸಿ ನಾಟ್ಯಾಜಲಿ ನೃತ್ಯ ಕಲಾ ಕೇಂದ್ರ ದ ಪ್ರದೀಪ ಭಟ್ಟ ಅಧ್ಯಕ್ಷತೆ ವಹಿಸಿದ್ದರು. 

ಗುರುವಂದನೆ: ಇದೇ ಸಂದರ್ಭದಲ್ಲಿ  ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ  ಅಧ್ಯಕ್ಷ ಪ್ರದೀಪ ಭಟ್ಟ  ಹಾಗೂ ಡಾ.ಸಹನಾ ಪ್ರದೀಪ ಭಟ್ ಅವರಿಗೆ ಮತ್ತು   ವಿನುತಾ ಭಟ್ ಅವರಿಗೆ ವಿದುಷಿ ದಿವ್ಯಾ ಹನಮಂತ ನಾಯ್ಕ   ಗುರುವಂದನೆ ಸಮರ​‍್ಿಸಿದರು.  

ಸತತ 3 ತಾಸು ನೃತ್ಯ ಪ್ರದರ್ಶನ :  ವಿದುಷಿ ದಿವ್ಯಾ ಹನಮಂತ ನಾಯ್ಕ  ಅವರು ಪುಷ್ಪಾಂಜಲಿ, ಗಣೇಶ ಸ್ತುತಿ,ಅಲಾರಿಪು, ಜತಿಸ್ವರ, ಶಿವಸ್ತುತಿ, ಗಂಗಾ, ವರ್ಣ, ದೇವರನಾಮ ಹಾಗೂ ತಿಲ್ಲಾನ ನೃತ್ಯಗಳನ್ನು ನವರಸ ಭಂಗಿಗಳನ್ನು ಅತ್ಯಂತ ಸುಂದರವಾಗಿ  ವ್ಯಕ್ತಪಡಿಸವ ಮೂಲಕ ಆಕರ್ಷವಾಗಿ ಹಾಗೂ ಅದ್ಭುತವಾಗಿ ಸತತ 3 ತಾಸುಗಳ ಕಾಲ ಪ್ರದರ್ಶನ ಮಾಡಿದರು. 

ಹಿಮ್ಮೇಳ ಸಾಥ್‌: ಡಾ.ಸಹನಾ ಪ್ರದೀಪ ಭಟ್ಟ ಅವರಿಂದ ನಟುವಾಂಗ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಅವರು ಹಾಡುಗಾರಿಕೆ, ವಿದ್ವಾನ್ ಪಂಚಮ್ ಉಪಾಧ್ಯಾಯ ಅವರು ಮೃದಂಗ ವಾದನ, ವಿದ್ವಾನ್ ಜಯರಾಮ ಕೊಳಲುವಾದನ, ಹಾಗೂ ವಿದ್ವಾನ್ ಅರುಣ ಕುಮಾರ ಅವರು ರಿದಂ ಪ್ಯಾಡ್ ಸಾಥ್ ನೀಡಿದರು.  ರಾಘವೇಂದ್ರ ಹೆಗಡೆ ಸ್ವಾಗತಿಸಿದರು, ಸತೀಶ ಮೂರೂರು  ಸುಂದರವಾಗಿ ಕಾರ್ಯಕ್ರಮ ನಿರೂಪಿಸಿದರು.