ಕಲಬುರಗಿ, ಫೆ.4, ತೊಗರೆಯ ಕಣಜ ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಸರ್ಕಾರಿ ನೌಕರರಿಂದ ಒಂದು ದಿನದ ವೇತನವಾಗಿ 3 ಕೋಟಿ ರೂ.ಗಳ ದೇಣಿಗೆ ಚೆಕ್ ಅನ್ನು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಹಸ್ತಾಂತರಿಸಲಾಯಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ನೌಕರರ ಪರವಾಗಿ ಜಿಲ್ಲಾಧಿಕಾರಿ ಅವರಿಗೆ ಚೆಕ್ ನೀಡಿದರು.
ನಂತರ ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ನೃಪತುಂಗ ನಾಡಿನಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಜಿಲ್ಲೆಯ ನೌಕರ ಬಾಂಧವರು ತಮ್ಮ ಒಂದು ದಿನದ ವೇತನ ದೇಣಿಗೆ ನೀಡುವುದರ ಮೂಲಕ ಸಮ್ಮೇಳನದ ಯಶಸ್ವಿಗೆ ಅಗತ್ಯ ಆರ್ಥಿಕ ಸಹಕಾರ ನೀಡಿರುವುದಕ್ಕೆ ಜಿಲ್ಲಾಡಳಿತ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೆಂಗಟಿ ಮಾತನಾಡಿ, ಮೂರು ದಶಕಗಳ ನಂತರ ನಮ್ಮೂರಿನಲ್ಲಿ ಕನ್ನಡ ಮೇರು ಹಬ್ಬ ನಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನಿರ್ದೇಶನದಂತೆ ಮತ್ತು ನೌಕರರ ಬಾಂಧವರ ಸಮ್ಮತಿ ಪಡೆದು ನುಡಿ ಸಮ್ಮೇಳನಕ್ಕೆ ಜಿಲ್ಲೆಯ ನೌಕಕರ ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೂರು ದಿನಗಳ ಸಮ್ಮೇಳನಕ್ಕೆ ಜಿಲ್ಲೆಯ ಸರ್ಕಾರಿ ನೌಕರರು ಭಾಗವಹಿಸಲು ಅನುಕೂಲವಾಗುವಂತೆ ಓ.ಓಡಿ. ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗೆ ಅವರಿಗೆ ರಾಜು ಲೆಂಗಟಿ ಅವರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕಕರ ಸಂಘದ ಗೌರವಾಧ್ಯಕ್ಷ ಅಬ್ದುಲ್ ಅಜೀಮ್, ಪ್ರಧಾನ ಕಾರ್ಯದರ್ಶಿ ವೆಂಕಟರಾವ ಇಟಗಿ, ರಾಜ್ಯ ಪರಿಷತ್ ಸದಸ್ಯ ಹಣಮಂತರಾಯ ಬಿ. ಗೋಳಸಾರ, ಖಜಾಂಚಿ ಸತೀಶ್ ಕೆ. ಸಜ್ಜನ್, ಉಪಾಧ್ಯಕ್ಷ ಬಾಬು ಎ. ಮೌರ್ಯ ಮತ್ತಿತರಿದ್ದರು.